ಬಾದಾಮಿ ಆರೋಗ್ಯಕರ ಡ್ರೈಫ್ರೂಟ್‌ಗಳಲ್ಲೊಂದು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಾದಾಮಿ ತುಂಬಾ ಅನುಕೂಲಕರವೆಂದು ಪರಿಗಣಿಸಲಾಗುತ್ತದೆ. ಬಾದಾಮಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ತೂಕ ಇಳಿಸಬಹುದು. ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.
ಆದರೆ ನೀವು ಬಾದಾಮಿಯನ್ನು ಅತಿಯಾಗಿ ಸೇವಿಸಿದರೆ ಪ್ರಯೋಜನಕ್ಕೆ ಬದಲಾಗಿ ಹಾನಿ ಮಾಡುತ್ತದೆ. ಹೌದು, ಅಗತ್ಯಕ್ಕಿಂತ ಹೆಚ್ಚು ಬಾದಾಮಿ ಸೇವಿಸುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಇದರಿಂದ ಇನ್ನೂ ಕೆಲವೊಂದು ಅನಾನುಕೂಲತೆಗಳಿವೆ.
ತೂಕ ಹೆಚ್ಚಳ : 28 ಗ್ರಾಂ ಬಾದಾಮಿಯಲ್ಲಿ ಸುಮಾರು 164 ಕ್ಯಾಲೋರಿ ಇರುತ್ತದೆ. ದೈನಂದಿನ ಆಹಾರದ ಜೊತೆಗೆ ಅತಿಯಾಗಿ ಬಾದಾಮಿಯನ್ನೂ ತಿಂದರೆ ದೇಹದ ತೂಕ ಹೆಚ್ಚಾಗಬಹುದು. ಆದ್ದರಿಂದ ದಿನಕ್ಕೆ ಕೇವಲ 5 ರಿಂದ 6 ಬಾದಾಮಿಗಳನ್ನು ಮಾತ್ರ ಸೇವಿಸಿ.
ಮಲಬದ್ಧತೆ ಸಮಸ್ಯೆ : ಬಾದಾಮಿಯಲ್ಲಿ ಫೈಬರ್ ಸಮೃದ್ಧವಾಗಿದೆ. ಫೈಬರ್ ಆರೋಗ್ಯಕ್ಕೆ ಒಳ್ಳೆಯದು, ಆದರೆ ಅತಿಯಾದ ಫೈಬರ್ ಕೂಡ ಆರೋಗ್ಯಕ್ಕೆ ಹಾನಿಕಾರಕ. ನೀವು ಹೆಚ್ಚು ಬಾದಾಮಿ ಸೇವಿಸಿದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಬರಬಹುದು, ಇದರಿಂದ ನಿಮಗೆ ಅತಿಸಾರ, ಹೊಟ್ಟೆ ಉಬ್ಬರಿಸುವುದು ಮತ್ತು ಕಿಬ್ಬೊಟ್ಟೆಯ ಸೆಳೆತ ಕೂಡ ಬರುವ ಸಾಧ್ಯತೆ ಇದೆ.
ಮೂತ್ರಪಿಂಡದಲ್ಲಿ ಕಲ್ಲು : ಬಾದಾಮಿಯು ಕರುಳಿನಲ್ಲಿ ಕರಗುವ ಆಕ್ಸಲೇಟ್ ಸಮೃದ್ಧವಾಗಿದೆ. ದೇಹದಲ್ಲಿ ಹೆಚ್ಚಿನ ಪ್ರಮಾಣದ ಆಕ್ಸಲೇಟ್ ಇದ್ದರೆ ಮೂತ್ರಪಿಂಡದಲ್ಲಿ ಕಲ್ಲು ಬೆಳೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬಾದಾಮಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.
ಅಲರ್ಜಿ ಸಮಸ್ಯೆ: ಕೆಲವರಿಗೆ ಬಾದಾಮಿ ತಿಂದರೆ ಅಲರ್ಜಿಯಾಗುತ್ತದೆ. ಬಾದಾಮಿ ಸೇವನೆಯಿಂದ ಗಂಟಲು ನೋವು, ತುಟಿಗಳ ಮೇಲೆ ಊತ ಸೇರಿದಂತೆ ಅನೇಕ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.