
ಹಾಗಲಕಾಯಿ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ತುಂಬಾ ಆರೋಗ್ಯಕಾರಿಯಾದ ತರಕಾರಿ. ಇದರಲ್ಲಿ ಹಲವಾರು ಆರೋಗ್ಯ ಗುಣಗಳಿವೆ.
ಆದರೆ ಮಕ್ಕಳು ಇದನ್ನು ತಿನ್ನಲು ಅಷ್ಟೊಂದು ಇಷ್ಟಪಡುವುದಿಲ್ಲ. ಹೀಗಾಗಿ ಮಕ್ಕಳಿಗೂ ಇಷ್ಟವಾಗುವ ರೀತಿಯಲ್ಲಿ ತಯಾರಿಸಿದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.
ಇಲ್ಲಿದೆ ಹಾಗಲಕಾಯಿ ಕುರ್ಮ ಮಾಡುವ ವಿಧಾನ.
ಬೇಕಾಗುವ ಸಾಮಾಗ್ರಿಗಳು
ಹಾಗಲಕಾಯಿ – 4-5
ಈರುಳ್ಳಿ – 2
ಟೊಮೆಟೋ – 2
ಹಸಿಮೆಣಸಿನ ಕಾಯಿ – 2
ಅಚ್ಚಖಾರದ ಪುಡಿ ಸ್ವಲ್ಪ
ಕಡಲೇಹಿಟ್ಟು- 2 ಟೀಸ್ಪೂನ್
ಗರಂಮಸಾಲಾ ಸ್ವಲ್ಪ
ಹುಣಸೆಹಣ್ಣು – ಬೆಲ್ಲದ ಗಾತ್ರದಷ್ಟು
ಮಾಡುವ ವಿಧಾನ
ಹಾಗಲಕಾಯಿಯನ್ನು ಸಣ್ಣ ಹೋಳುಗಳಾಗಿ ಹೆಚ್ಚಿಕೊಂಡು, ಅದನ್ನು ಹುಣಸೇ ಹಣ್ಣಿನ ಹುಳಿಯಲ್ಲಿ ಚೆನ್ನಾಗಿ ಫ್ರೈ ಮಾಡಬೇಕು. ಹೀಗೇ ಮಾಡುವುದರಿಂದ ಅದರಲ್ಲಿನ ಸ್ವಲ್ಪ ಕಹಿ ಅಂಶ ಕಡಿಮೆಯಾಗುತ್ತದೆ. ಮತ್ತೊಂದು ಬಾಣಲಿಯಲ್ಲಿ ಒಗ್ಗರಣೆಗೆ ಸಾಸಿವೆ, ಕಡಲೇಬೇಳೆ, ಹಸಿಮೆಣಸಿನಕಾಯಿ, ಈರುಳ್ಳಿ ಮತ್ತು ಟೊಮೆಟೊವನ್ನು ಹಾಕಿ ಚೆನ್ನಾಗಿ ಬಾಡಿಸಿ ಕೊಳ್ಳಬೇಕು.
ಇದಕ್ಕೆ ಈಗಾಗಲೇ ಫ್ರೈ ಮಾಡಿಕೊಂಡ ಹಾಗಲಕಾಯಿಯನ್ನು ಹಾಕಿ ಮತ್ತೊಂದು ಬಾರಿ ಚೆನ್ನಾಗಿ ಫ್ರೈ ಮಾಡಬೇಕು. ಹೀಗೇ ಮಾಡಿದ ಮೇಲೆ ಅದಕ್ಕೆ ಉಪ್ಪು, ಅಚ್ಚಖಾರದ ಪುಡಿ, ಗರಂಮಸಾಲ ಹಾಗೂ ನೀರಿನಲ್ಲಿ ಕದಡಿಕೊಂಡ ಕಡಲೇಹಿಟ್ಟಿನ ಮಿಶ್ರಣವನ್ನು ಹಾಕಿ ಚೆನ್ನಾಗಿ ಕುದಿಸಿದರೆ ಹಾಗಲಕಾಯಿಯ ಕುರ್ಮ ರೆಡಿ. ಚಪಾತಿ ಜೊತೆ ಕುರ್ಮ ಸವಿದರೆ ರುಚಿಯಾಗಿರುತ್ತದೆ.