ಬೆಂಗಳೂರು: ರಾಜ್ಯ ವಿಧಾನಸಭೆಗೆ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಉಪನ್ಯಾಸಕರು ಚುನಾವಣಾ ಕೆಲಸ ನಿರ್ವಹಿಸುವುದರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಕೊಂಚ ವಿಳಂಬವಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕ್ರಮ ಕೈಗೊಂಡಿದೆ. ಅಂದಾಜು 23 ಸಾವಿರ ಮೌಲ್ಯಮಾಪಕರಿಗೆ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಲು ಆದೇಶ ನೀಡಲಾಗಿದೆ. ಏಪ್ರಿಲ್ 5ರಿಂದ ಆರಂಭವಾಗಲಿರುವ ಮೌಲ್ಯಮಾಪನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಶೇಕಡ 30ರಷ್ಟು ಮೌಲ್ಯಮಾಪಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವುದರಿಂದ ಮೌಲ್ಯಮಾಪನ ಕಾರ್ಯ ವಿಳಂಬವಾಗುವ ಸಾಧ್ಯತೆ ಇದೆ.
ದ್ವಿತೀಯ ಪಿಯುಸಿ ಮೌಲ್ಯಮಾಪನ ವಿಕೇಂದ್ರೀಕರಣವಾಗಿದ್ದು, ತರಬೇತಿ ಮತ್ತು ಮೌಲ್ಯಮಾಪನಕ್ಕೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಉಪನ್ಯಾಸಕರು ಪ್ರತ್ಯೇಕ ಜಿಲ್ಲೆಗಳಿಗೆ ಹೋಗಬೇಕಿದೆ. ಇದರಿಂದ ಬಹುತೇಕ ಮೌಲ್ಯಮಾಪಕರು ಮೌಲ್ಯಮಾಪನ ಕಾರ್ಯದಿಂದ ವಿನಾಯಿತಿ ಕೇಳಲು ನಿರ್ಧರಿಸಿದ್ದು, ಇದು ಮೌಲ್ಯಮಾಪಕರ ಕೊರತೆಗೆ ಕಾರಣವಾಗುತ್ತದೆ. ಇದರ ಪರಿಣಾಮ ಮೌಲ್ಯಮಾಪನ ಕಾರ್ಯ ವಿಳಂಬವಾಗಲಿದೆ. ಇದನ್ನು ತಪ್ಪಿಸಲು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಖಾಸಗಿ ಉಪನ್ಯಾಸಕರನ್ನು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೊಡಗಿಸಲು ಯೋಜಿಸಿದೆ.