ಥಾಣೆಯ ಯೂರೋ ಕಿಡ್ಸ್ ಶಿಶುವಿಹಾರದಲ್ಲಿ ಮೂರು ವರ್ಷದ ಬಾಲಕನೊಬ್ಬನನ್ನು ಶಿಕ್ಷಕಿ ಕಟ್ಟಿಹಾಕಿ ಚಿತ್ರಹಿಂಸೆ ನೀಡಿದ ವಿಡಿಯೋವೊಂದು ವೈರಲ್ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಗುವನ್ನು ತನ್ನ ದುಪ್ಪಟ್ಟಾದಿಂದ ಕಟ್ಟಿಹಾಕಿದ ಶಿಕ್ಷಕಿ ಅದಕ್ಕೆ ಹಲ್ಲೆ ಮಾಡುತ್ತಿರುವ ಶಾಕಿಂಗ್ ಘಟನೆಯಲ್ಲಿ ಶಾಲೆಯ ಸಿಸಿಟಿವಿ ಕ್ಯಾಮೆರಾಗಳು ಸೆರೆ ಹಿಡಿದಿವೆ. ಮಗುವಿನ ತಂದೆ ದಿನೇಶ್ ಹತ್ತಿರದ ನೌಪಾಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಗುವನ್ನು ಮನೆಗೆ ಕರೆದುಕೊಂಡು ಹೋಗಲು ಬಂದಿದ್ದ ತಾಯಿಗೆ ಮಗುವಿನ ವರ್ತನೆಯಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದಿದ್ದು, ಆತ ಭಯದಿಂದ ಕುಗ್ಗಿಹೋಗಿರುವುದು ಕಂಡಿದೆ. ತಾನು ಮತ್ತೆ ಶಾಲೆಗೆ ಹೋಗಲು ವಿಪರೀತ ಹಠ ಮಾಡಿದ ಮಗನ ವರ್ತನೆಯಿಂದ ತಂದೆಗೆ ಅನುಮಾನ ಬಂದಿದೆ.
ಪ್ರಜಾಕ್ತಾ ಪಾಥಾರೆ ಹೆಸರಿನ ಶಿಕ್ಷಕಿ ತನ್ನ ಮೇಲೆ ಜೋರಾಗಿ ಕೂಗಾಡಿದ್ದಲ್ಲದೇ, ಹಲ್ಲೆ ಮಾಡಿದ್ದಾಗಿ ಮಗು ತನ್ನ ಹೆತ್ತವರ ಬಳಿ ಬಾಯಿ ಬಿಟ್ಟಿದ್ದಾನೆ. ಶಿಕ್ಷಕಿಯು ಮಗುವಿನ ಕೈ ಮಾತ್ರ ಹಿಡಿದಿದ್ಧು ಅದರ ಮೇಲೆ ಹಲ್ಲೆ ಮಾಡಿಲ್ಲ ಎಂದು ಸಮರ್ಥಿಸಿದ್ದಾರೆ. ಆದರೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಬೇರೆಯದೇ ಕಥೆ ಕಂಡು ಬಂದಿದೆ.
ಮಗುವಿಗೆ ಜೋರಾಗಿ ಬಾರಿಸಿದ ಶಿಕ್ಷಕಿ, ಆತನನ್ನು ತನ್ನ ದುಪಟ್ಟಾ ಬಳಸಿ ಕಟ್ಟಿಹಾಕಿರುವುದು ವಿಡಿಯೋ ತುಣುಕಿನಲ್ಲಿ ಕಂಡು ಬಂದಿದೆ.
ದಿನೇಶ್ ಶೆಟ್ಟಿಗಾರ್ ಕೊಟ್ಟ ದೂರಿನ ಅನ್ವಯ ಶಿಕ್ಷಕಿಯ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.