ಕಾನ್ಪುರ್: ಇಟಾವಾ ಜಿಲ್ಲೆಯ ಪಚೈಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಬರೌಲಿ ಗ್ರಾಮದಲ್ಲಿ ಹೊಲದಲ್ಲಿ ಉಳುಮೆ ಮಾಡುವಾಗ ಬೆಳ್ಳಿ ನಾಣ್ಯಗಳು ತುಂಬಿದ್ದ ಮಡಿಕೆ ಪತ್ತೆಯಾಗಿದೆ. ಈ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಟ್ರ್ಯಾಕ್ಟರ್ ಚಾಲಕ ಮತ್ತು ಕಾರ್ಮಿಕರು ನಿಧಿ ಸಮೇತ ಪರಾರಿಯಾಗಿದ್ದಾರೆ.
ಜಮೀನಿನ ಮಾಲೀಕಳಾದ ರೇಣು ಹೊಲದಲ್ಲಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿಸುವಾಗ ಟ್ರ್ಯಾಕ್ಟರ್ ನೇಗಿಲಿಗೆ ತಗುಲಿದ ನಾಣ್ಯಗಳಿಂದ ತುಂಬಿದ್ದ ಮಡಿಕೆ ಕಂಡು ಬಂದಿದೆ. ಟ್ರ್ಯಾಕ್ಟರ್ ಚಾಲಕ ಹಾಗೂ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ನೆಲದಲ್ಲಿದ್ದ ಬೆಳ್ಳಿ ನಾಣ್ಯಗಳಿದ್ದ ಮಡಿಕೆ ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಮಾಹಿತಿ ತಿಳಿದು ರೇಣು ಜಮೀನಿಗೆ ಡೌಡಾಯಿಸಿದರೂ ಈ ವೇಳೆಗಾಗಲೇ ಕಾರ್ಮಿಕರು ಪರಾರಿಯಾಗಿದ್ದರು.
ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ 35 ಬೆಳ್ಳಿ ನಾಣ್ಯಗಳನ್ನು ಕಾರ್ಮಿಕರಿಂದ ವಶಕ್ಕೆ ಪಡೆದುಕೊಂಡಿದ್ದಾರೆ. 1850 ನೇ ಇಸವಿಯ ವಿಕ್ಟೋರಿಯಾ ರಾಣಿ ಮತ್ತು ಬ್ರಿಟಿಷರ ಮುದ್ರೆ ಇರುವ ಬೆಳ್ಳಿ ನಾಣ್ಯಗಳು ಇವಾಗಿದ್ದು, ಸುಮಾರು 150 ವರ್ಷ ಹಳೆಯವು ಎಂದು ಹೇಳಲಾಗಿದೆ.
ರೇಣು ಅವರು ತಮ್ಮ ಜಮೀನಿನಲ್ಲಿ ದೊರೆತ ಬೆಳ್ಳಿಯ ನಾಣ್ಯಗಳನ್ನು ದೋಚಿದ ಕಾರ್ಮಿಕರ ವಿರುದ್ಧ ದೂರು ನೀಡಿದ್ದಾರೆ. ಪಚೈಗಾಂವ್ ಠಾಣೆಯ ಪೊಲೀಸರು ನಾಣ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪುರಾತತ್ವ ಇಲಾಖೆ ಮತ್ತು ಮ್ಯಾಜಿಸ್ಟ್ರೇಟ್ ಗೆ ವರದಿ ನೀಡಲಾಗಿದೆ ಎಂದು ಸಿಟಿ ಎಸ್ಪಿ ಕಪಿಲ್ ದೇವ್ ಸಿಂಗ್ ತಿಳಿಸಿದ್ದಾರೆ.