ಚಿಕ್ಕಬಳ್ಳಾಪುರ : : ರಾಜ್ಯದಲ್ಲಿ ಸ್ಟಾರ್ಟ್ ಅಪ್ಗಳು ಮತ್ತು ಉದ್ದಿಮೆಗಳು ನೂತನ ಉತ್ಪನ್ನಗಳ ಸಂಶೋಧನೆಗೆ ಮತ್ತು ಉತ್ಪಾದನೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸಂಶೋಧನಾ ಫೌಂಡೇಶನ್ ನ್ನು ಸ್ಥಾಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಬೋಸರಾಜು ಅವರು ತಿಳಿಸಿದರು.
ಚಿಕ್ಕಬಳ್ಳಾಪುರದ ಸತ್ಯ ಸಾಯಿ ಗ್ರಾಮದಲ್ಲಿ ಆಯೋಜಿಸಲಾಗಿರುವ ಇಂಡಿಯನ್ ಸ್ಟಾರ್ಟ್ಅಪ್ ಫೆಸ್ಟಿವಲ್ – 2023 ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವೈಜ್ಞಾನಿಕ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಆರ್ಥಿಕ ಚಟುವಟಿಕೆಗಳಿಗೆ ಬಹಳ ಅಗತ್ಯ ಮತ್ತು ಸ್ಟಾರ್ಟ್ ಅಪ್ ಎಕೋಸಿಸ್ಟಮ್ಗೆ ಮೂಲ. ನಮ್ಮ ಸರಕಾರ ಸ್ಟಾರ್ಟ್ ಅಪ್ಗಳ ಸ್ಥಾಪನೆಗೆ ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಿದೆ. ಶಿಕ್ಷಣದಲ್ಲಿ ವೈಜ್ಞಾನಿಕ ಅಂಶಗಳನ್ನು ಅಳವಡಿಸುವ, ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಉದ್ದಿಮೆಗಳಿಗೆ ಪೂರಕವಾದ ವಾತಾವರಣ, ಪರಿಸರ ಸುಸ್ಥಿರತೆಯನ್ನು ಕಾಪಾಡುವಂತಹ ರೋಬಸ್ಟ್ ಎಕಾಮಿಯನ್ನ ಉತ್ತೇಜಿಸುವ ಗುರಿಗಳನ್ನು ನಾವು ಹೊಂದಿದ್ದೇವೆ. ಬೆಂಗಳೂರು ನಗರ ಸ್ಟಾರ್ಟ್ಅಪ್ ಗಳ ರಾಜಧಾನಿ ಎಂದೇ ಹೆಸರುವಾಸಿ. ರಾಜ್ಯದಲ್ಲಿರುವ ಹೂಡಿಕೆ ಪೂರಕ ವಾತಾವರಣದ ಕಾರಣದಿಂದಾಗಿ ಹೆಚ್ಚಿನ ಉದ್ದಿಮೆಗಳು ಹಾಗೂ ಸ್ಟಾರ್ಟ್ ಅಪ್ ಗಳು ಸ್ಥಾಪನೆ ಆಗುತ್ತಿವೆ. ಹೊಸ ಉದ್ದಿಮೆಗಳೂ ಹಾಗೂ ಕೈಗಾರಿಕೆಗಳ ಬೆಳವಣಿಗೆಗೆ ಸಂಶೋಧನೆ ಬಹಳ ಅವಶ್ಯಕ. ಉತ್ತಮ ಉತ್ಪನ್ನಗಳನ್ನ ಹಾಗೂ ಸೇವೆಗಳನ್ನ ನೀಡುವ ನಿಟ್ಟಿನಲ್ಲಿ ಸಂಸ್ಥೆಗಳಿಗೆ ಸಂಶೋಧನೆ ಕೈಗೊಳ್ಳಲು ಅನುವು ಮಾಡಿಕೊಡುವ ಉದ್ದೇಶವನ್ನು ಕರ್ನಾಟಕ ರಿಸರ್ಚ್ ಫೌಂಡೇಶನ್ ಹೊಂದಿದೆ ಎಂದು ಎನ್.ಎಸ್ ಬೋಸರಾಜು ಅವರು ತಿಳಿಸಿದರು.