alex Certify BIG NEWS : ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 3 ಸಾವಿರ ‘KPS’ ಶಾಲೆಗಳ ಸ್ಥಾಪನೆ : ಸಚಿವ ಮಧು ಬಂಗಾರಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 3 ಸಾವಿರ ‘KPS’ ಶಾಲೆಗಳ ಸ್ಥಾಪನೆ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 3 ಸಾವಿರ ಕೆಪಿಎಸ್ ಶಾಲೆಗಳ ಸ್ಥಾಪನೆ ಮಾಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಹೇಳಿದರು.

ಡಿ.ವಿ.ಎಸ್ ಪ್ರೌಢಶಾಲಾ ಆವರಣದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ 2023-24ರ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಕೆಲಸವನ್ನು ಮಾಡಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು.

ಮಕ್ಕಳಲ್ಲಿರುವ ಪ್ರತಿಭೆ ದೇಶದ ಆಸ್ತಿ. ಅದನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಲಾಗುವುದು, ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳಲ್ಲಿರುವ ಪ್ರತಿಭೆ, ಕಲೆ, ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.ನನ್ನ ಇಲಾಖಾ ವ್ಯಾಪ್ತಿಯಡಿ ಸರ್ಕಾರಿ, ಅನುದಾನಿತ ಸೇರಿ ಒಟ್ಟು 58 ಸಾವಿರ ಶಾಲೆಗಳು, ಅನುದಾನರಹಿತ ಸೇರಿದಂತೆ ಒಟ್ಟು 76 ಸಾವಿರ ಶಾಲೆಗಳಿದ್ದು 1 ಕೋಟಿ 2 ಲಕ್ಷ ಮಕ್ಕಳಿದ್ದಾರೆ. ವಿದ್ಯೆ ಒಂದು ಉತ್ತಮ ಸಂಪನ್ಮೂಲವಾಗಿದ್ದು ವಿದ್ಯಾದಾನ ದೇವರ ಕೆಲಸವಿದ್ದಂತೆ. ಇಂತಹ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳಿವೆ. ಆದರೆ ಹಂತ ಹಂತವಾಗಿ ಅವುಗಳಿಗೆ ಪರಿಹಾರೋಪಾಯ ಕಂಡುಕೊಳ್ಳಲಾಗುವುದು ಎಂದರು.

53 ಸಾವಿರ ಶಿಕ್ಷಕರ ಕೊರತೆ ಇತ್ತು. ಇದರಲ್ಲಿ 13 ಸಾವಿರ ಶಿಕ್ಷಕರ ನೇಮಕ ಮಾಡಲಾಗಿದೆ. 4 ರಿಂದ 5 ಸಾವಿರ ದೈಹಿಕ ಶಿಕ್ಷಕರ ಕೊರತೆ ಇದೆ. ದೈಹಿಕ ಶಿಕ್ಷಕರು, ಕಲೆ, ಸಂಗೀತ ಶಿಕ್ಷಕರ ಕೊರತೆಯನ್ನು ಹಂತ ಹಂತವಾಗಿ ನೀಗಿಸಲಾಗುವುದು ಎಂದರು.

3 ಸಾವಿರ ಕೆಪಿಎಸ್ ಶಾಲೆ ಸ್ಥಾಪನೆ: ಮುಂಬರುವ 3 ವರ್ಷಗಳಲ್ಲಿ ರಾಜ್ಯದಲ್ಲಿ 3 ಸಾವಿರ ಕೆಪಿಎಸ್ ಶಾಲೆ ಸ್ಥಾಪಿಸಲಾಗುವುದು. ಎಲ್ಕಿಜಿ ಯಿಂದು ಹಿಡಿದು 2 ನೇ ಪಿಯುಸಿ ವರೆಗೆ ಕಲೆ, ಸಂಗೀತ, ಕ್ರೀಡೆ ಇತರೆ ಚಟುವಟಿಕೆಗಳನ್ನೊಳಗೊಂಡ ಗುಣಮಟ್ಟದ ಶಿಕ್ಷಣ ಇಲ್ಲಿ ಲಭಿಸಲಿದೆ. ಮುಂದಿನ ವರ್ಷ 500 ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸಲಾಗುವುದು. ಪ್ರತಿ ಶಾಸಕರ ಕ್ಷೇತ್ರದಲ್ಲಿ 4 ರಿಂದ 6 ಶಾಲೆಗಳು ಉನ್ನತೀಕರಣಗೊಳ್ಳಲಿವೆ ಎಂದರು.

ಪೌಷ್ಟಿಕತೆಯೆಡೆ ಹೆಜ್ಜೆ : ಸರ್ಕಾರ ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಉತ್ತಮ ಹೆಜ್ಜೆ ಇಟ್ಟಿದ್ದು ಮೊದಲು 8ನೇ ತರಗತಿವರೆಗೆ ಇದ್ದ ಮೊಟ್ಟೆ ವಿತರಣೆಯನ್ನು ಇದೀಗ 10 ನೇ ತರಗತಿವರೆಗೆ ವಿಸ್ತರಿಸಿ ವಾರದಲ್ಲಿ 2 ದಿನ ಮೊಟ್ಟೆಯನ್ನು ನೀಡಲಾಗುತ್ತಿದೆ. ಕ್ಷೀರ ಭಾಗ್ಯ ಯೋಜನೆಯೊಂದಿಗೆ ಶೀಘ್ರದಲ್ಲೇ ಸಿಫ್ಆರ್ಟಿ ದೃಡೀಕರಣ ದೊರತ ತಕ್ಷಣ 60 ಲಕ್ಷ ಮಕ್ಕಳಿಗೆ ರಾಗಿ ಮಾಲ್ಟ್ ನೀಡಲಾಗುವುದು ಎಂದರು.

ಮಕ್ಕಳ ಶೈಕ್ಷಣಿಕ ಬೆಳವಣಿಗೆ ಉದ್ದೇಶದಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ 3 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಅನುದಾನಿತ ಶಾಲೆಗಳು ಸಹ ಸರ್ಕಾರದ ಅಂಗವಾಗಿದ್ದು, 2020 ರವರೆಗೆ ಖಾಲಿ ಇರುವ ಶಿಕ್ಷಕರನ್ನು ತುಂಬಲು ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು. ಹಂತ ಹಂತವಾಗಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ಎಲ್ಲ ರೀತಿಯ ಸಮಸ್ಯೆಗಳನ್ನು ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ರೆಡ್ಕ್ರಾಸ್ ವತಿಯಿಂದ ನೀಡಲಾದ ಮಾಸ್ಕ್ಗಳನ್ನು ವಿದ್ಯಾರ್ಥಿಗಳು ಮತ್ತು ಆಶಾ ಕಾರ್ಯಕರ್ತೆರಿಗೆ ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು ಹಾಗೂ ಕಲಿಕೆಯಲ್ಲಿ ಹಿಂದುಳಿದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಸಿದ್ದಪಡಿಸಲಾದ ವಿಷನ್-95 ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಡಾ. ಸೆಲ್ವಮಣಿ ಆರ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಡಿವಿಎಸ್ ಸಮಿತಿಯ ರುದ್ರಗೌಡ, ದಿನೇಶ್, ಸುಮತಿ.ಜೆ, ಡಿ.ಬಿ ರುದ್ರಪ್ಪ, ರಾಜಶೇಖರ್, ಸತೀಶ್, ಎಂ.ವೈ ಧರ್ಮಪ್ಪ, ಸದಾನಂದ ಗೌಡ, ರಾಘವೇಂದ್ರ, ಬಸವರಾಜ್ ವಿ. ಹಿರೇಮಠ್, ಡಯಟ್ ಪ್ರಾಂಶುಪಾಲರಾದ ಬಸವರಾಜಪ್ಪ ಬಿ.ಆರ್, ಅನ್ಸರ್ ಆಲಿಬೇಗಂ, ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...