
ನವದೆಹಲಿ: ರಾಜ್ಯದಲ್ಲಿ ಅಡಿಕೆ ಮಂಡಳಿ ಸ್ಥಾಪಿಸಬೇಕು ಎಂದು ಲೋಕಸಭೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯಿಸಿದ್ದಾರೆ.
ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ಅಡಿಕೆ ಬೆಲೆ ಸ್ಥಿರತೆ, ಸಂಶೋಧನೆ, ವಿಸ್ತರಣೆ ಮತ್ತು ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಬಿಹಾರದ ಮಖಾನಾ ಮಂಡಳಿ ಮಾದರಿಯಲ್ಲಿ ಕರ್ನಾಟಕದಲ್ಲಿ ಅಡಿಕೆ ಮಂಡಳಿ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ದೇಶದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇಕಡ 40ರಷ್ಟು ಇದೆ. ದಾವಣಗೆರೆ ಸೇರಿದಂತೆ ರಾಜ್ಯದ 15 ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಅಡಿಕೆ ಮಂಡಳಿ ಸ್ಥಾಪನೆಯ ಅಗತ್ಯವಿದೆ ಎಂದು ಹೇಳಿದ್ದಾರೆ.
ಇತ್ತೀಚಿಗೆ ಅಡಿಕೆ ಬೆಳೆಯ ವಿಸ್ತೀರ್ಣ ಹೆಚ್ಚಾಗಿದೆ. ಕರಾವಳಿ, ಮಲೆನಾಡು, ಅರೆ ಮಲೆನಾಡು ಭಾಗಕ್ಕೆ ಸೀಮಿತವಾಗಿದ್ದ ಅಡಿಕೆ ರಾಜ್ಯದ ಹಲವೆಡೆ ವಿಸ್ತರಿಸಿದೆ. 10 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಪ್ರತ್ಯಕ್ಷ, ಪರೋಕ್ಷವಾಗಿ ಅಡಿಕೆ ಬೆಳೆಯನ್ನು ಆಶ್ರಯಿಸಿವೆ ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದು, ಕೊಳೆರೋಗ, ಹಳದಿ ಎಲೆ ಚುಕ್ಕಿ ಸೇರಿದಂತೆ ಅನೇಕ ರೋಗಗಳಿಗೆ ಅಡಿಕೆ ಬೆಳೆ ಹಾಳಾಗುತ್ತಿದೆ. ಅಡಿಕೆ ಇಳುವರಿ ಕುಂಠಿತವಾಗುತ್ತಿದೆ. ಅಡಿಕೆ ಆಮದು ಹೆಚ್ಚಾಗುತ್ತಿರುವ ಪರಿಣಾಮ ಬೆಲೆ ಸ್ಥಿರವಾಗಿ ಉಳಿಯುತ್ತಿಲ್ಲ. ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಡಿಕೆ ಮಂಡಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ.