ಚಿತ್ರದುರ್ಗ : ಈಶ್ವರಪ್ಪಗೆ ಕಡಿ, ಬಡಿ, ಕೊಲ್ಲು ಇದು ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.
ಈಶ್ವರಪ್ಪನವರಿಗೆ ಕಡಿ, ಬಡಿ, ಕೊಲ್ಲು ಇದು ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ. ಮಾತೆತ್ತಿದರೆ ನನಗೆ ಆರ್.ಎಸ್.ಎಸ್ ನಲ್ಲಿ ತರಬೇತಿಯಾಗಿದೆ, ತಾನೊಬ್ಬ ಶಿಸ್ತಿನ ಸಿಪಾಯಿ ಎನ್ನುತ್ತಾರೆ. ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಡಿ.ಕೆ.ಸುರೇಶ್ ಅವರನ್ನು ಗುಂಡಿಟ್ಟು ಕೊಲ್ಲಿ ಎಂದು ಹೇಳುವುದು ಒಂದು ರಾಜಕೀಯ ಪಕ್ಷದ ಮುಖಂಡರಾಗಿ ಹೇಳುವ ಮಾತೇ? ಇವರನ್ನು ರಾಜಕೀಯ ಧುರೀಣರು ಎಂದು ಕರೆಯಬೇಕೇ? ಎಂದರು.
ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಆಗಿರುವ ವಿಚಾರಕ್ಕೆ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗುವ ಯೋಚನೆ ಸರ್ಕಾರದ ಮುಂದಿಲ್ಲ. ಆದರೆ ರಾಜ್ಯಕ್ಕೆ 100 ರೂ.ಗಳಿಗೆ ಕೇವಲ 13 ರೂ. ಬರುತ್ತಿದೆ. ಹಿಂದೆ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ, ಗುಜರಾತಿಗೆ ಕಡಿಮೆ ತೆರಿಗೆ ಹಂಚಿಕೆ ವಿರೋಧಿಸಿ, ಗುಜರಾತ್ ನಿಂದ ತೆರಿಗೆ ಪಡೆಯುವುದನ್ನೇ ಕೇಂದ್ರ ಬಿಟ್ಟುಕೊಡಲಿ ಎಂದಿದ್ದರು. ಆದರೆ ಈಗ ಪ್ರಧಾನಿಯಾಗಿ, ರಾಜ್ಯದ ಪ್ರತಿಭಟನೆಗೆ ‘ದೇಶ ವಿಭಜನೆ ಮಾಡಲು ಹೊರಟಿದ್ದಾರೆ’ ಎಂದು ಟೀಕಿಸಿದ್ದಾರೆ ಎಂದರು.
ತೆರಿಗೆಯಲ್ಲಿ ರಾಜ್ಯದ ಪಾಲು ಪಡೆಯುವ ಬೇಡಿಕೆಯಾಗಿದೆ. 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕದ ತೆರಿಗೆ ಪಾಲಿನ ಪ್ರಮಾಣವನ್ನು 4.71 % ರಿಂದ 3.64% ಇಳಿಸಲಾಗಿದೆ. 2017-18 ರಿಂದ ಇಲ್ಲಿಯವರೆಗೆ 1,87,000 ಲಕ್ಷ ಕೋಟಿ ತೆರಿಗೆ ಪಾಲು ರಾಜ್ಯಕ್ಕೆ ನಷ್ಟವಾಗಿದೆ. ಇದು ಕನ್ನಡಿಗರಿಗೆ ಕ್ರೋಧ ತರುವ ವಿಚಾರ ಎಂದರು.
2023-24ನೇ ಸಾಲಿನ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳ ಅನುದಾನ ನೀಡುವುದಾಗಿ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಈವರೆಗೆ ಒಂದು ರೂಪಾಯಿಯನ್ನೂ ನೀಡಿಲ್ಲ. ನಾವು 8,000 ಕೋಟಿ ರೂ.ಗಳನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಖರ್ಚು ಮಾಡಿದ್ದೇವೆ. ಈ ಪೈಕಿ 6,000 ಕೋಟಿ ರೂ. ವನ್ನೂ ರಾಜ್ಯ ಸರ್ಕಾರ ವೆಚ್ಚ ಮಾಡಿದೆ. ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಡಿಕೆಶಿ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಹಣ ಬಿಡುಗಡೆಗೆ ಮನವಿ ಮಾಡಿದ್ದಾರೆ. ನಾನೂ ಕೂಡ ಮನವಿ ಮಾಡಿದ್ದೇನೆ ಎಂದರು.
ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿರುವ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ಹೇಳಿದಂತೆ 5,300 ಕೋಟಿ ಒದಗಿಸುವುದು ಅವರ ಜವಾಬ್ದಾರಿ. 15ನೇ ಹಣಕಾಸು ಆಯೋಗದವರು ಶಿಫಾರಸ್ಸು ಮಾಡಿದ್ದ 5,495 ಕೋಟಿ ರೂ.ಗಳ ವಿಶೇಷ ಅನುದಾನ ಹಾಗೂ ರೂ. 6,000 ಕೋಟಿ ಸೇರಿ 11,495 ಕೋಟಿ ರೂ.ಗಳನ್ನು ತಿರಸ್ಕರಿಸಿದರು. ಇದು ಅನ್ಯಾಯವಲ್ಲವೇ? ಎಂದರು.
ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24 ನೇ ಸಾಲಿನ ಬಜೆಟ್ ನಲ್ಲಿ ಕೇಂದ್ರದಿಂದ 5,300 ಕೋಟಿ ರೂ.ಗಳು ಬರಲಿದೆ ಎಂದು ಪುನರುಚ್ಚರಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡುತ್ತೇವೆ ಎಂದಿದ್ದರೂ, ಕೇಂದ್ರ ಬಿಜೆಪಿ ಸರ್ಕಾರ ಇನ್ನೂ ಘೋಷಣೆ ಮಾಡಿಲ್ಲ ಎಂದರು.
ಹಿಂದಿನ BJP Karnataka ಸರ್ಕಾರದ 40% ಕಮೀಷನ್ ಆರೋಪದ ತನಿಖೆಗೆ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಈಗ ಸರ್ಕಾರದ ಅಧಿಕಾರಿಗಳೂ ಲಂಚ ಕೇಳುತ್ತಿರುವ ಆರೋಪದ ಮಾಡಿರುವ ಹಿನ್ನಲೆಯಲ್ಲಿ ದಾಖಲಾತಿಗಳನ್ನು ಒದಗಿಸಿದರೆ ಆಯೋಗದಿಂದಲೇ ತನಿಖೆಯನ್ನು ನಡೆಸಲಾಗುವುದು ಎಂದರು.