
ಬೆಂಗಳೂರು: ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪತಿ ಮೂರ್ತಿಗಳ ತಯಾರಿಕೆ, ಮಾರಾಟ, ವಿಸರ್ಜನೆ ಕಟ್ಟುನಿಟ್ಟಾಗಿ ನಿಷೇಧಿಸಲು ಕ್ರಮ ಕೈಗೊಳ್ಳುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
ವಿಧಾನ ಸೌಧದಲ್ಲಿ ಸಮಿತಿ ಸಭಾಂಗಣದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪತಿ ಮೂರ್ತಿ ಬಳಕೆಗೆ ಕಡಿವಾಣ ಹಾಕುವ ಕುರಿತಾಗಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಸಚಿವರು, ಪಿಒಪಿ ಗಣಪತಿ ಮೂರ್ತಿಗಳ ಜತೆಗೆ ಅದಕ್ಕೆ ಬಳಿಯುವ ರಾಸಾಯನಿಕ ಬಣ್ಣಗಳಿಂದ ಜಲಮೂಲಗಳಿಗೆ ಹಾನಿಯಾಗುತ್ತಿದೆ. ಪಿಒಪಿ ಮೂರ್ತಿಗಳ ಬಳಕೆ ನಿಷೇಧಿಸಿ ಈ ಹಿಂದೆಯೇ ಆದೇಶಿಸಲಾಗಿದೆ. ಆದರೂ ಸಮರ್ಪಕವಾಗಿ ಜಾರಿಯಾಗಿಲ್ಲ. ತಯಾರಿಕೆ ಮಾರಾಟ ಜತೆಗೆ ವಿಸರ್ಜನೆಯನ್ನು ಕೂಡ ನಿಷೇಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳ ಬಳಕೆ ಮಾಡಬೇಕು. ಎಲ್ಲಾ ಶಾಲಾ, ಕಾಲೇಜು, ಇತರೆಡೆ ಜಾಗೃತಿ ಮೂಡಿಸಬೇಕು. ಪರಿಸರ ಇಲಾಖೆ, ಪೊಲೀಸ್ ಇಲಾಖೆ, ಗ್ರಾಮೀಣಾಭಿವೃದ್ಧಿ, ಇಲಾಖೆ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ಪ್ಲಾಸ್ಟಿಕ್ ಮತ್ತು ಪಿಒಪಿ ಬಳಕೆ ನಿಯಂತ್ರಿಸಲು ಮುಂದಾಗಬೇಕೆಂದು ಹೇಳಲಾಗಿದೆ.