ಬೆಂಗಳೂರು: ಜಾತಿ ಗಣತಿಗೆ ವಿರೋಧವಿಲ್ಲ, ಗಣತಿ ಬಗ್ಗೆ ಅನುಮಾನ ಇದ್ದು, ಹೊಸದಾಗಿ ಜಾತಿ ಗಣತಿ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ನಡೆದ ಗಣತಿ ವೇಳೆ ಎಲ್ಲರ ಮನೆಗೆ ಹೋಗಿಲ್ಲ, ಸರಿಯಾಗಿ ಸಮೀಕ್ಷೆ ನಡೆದಿಲ್ಲ ಎಂಬ ದೂರುಗಳಿವೆ. 7 ವರ್ಷದ ಹಿಂದೆ ನಡೆದ ಗಣತಿ ಬಗ್ಗೆ ನಮ್ಮ ಅನುಮಾನವಿದ್ದು, ಹೊಸದಾಗಿ ಜಾತಿ ಗಣತಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರು ಜಾತಿ ಗಣತಿ ನಡೆಯಬೇಕು. ಅವಕಾಶ ವಂಚಿತರಿಗೆ ಹೆಚ್ಚಿನ ಅನುಕೂಲ ಸಿಗಬೇಕು ಎಂದು ಹೇಳಿದ್ದಾರೆ. ಆದರೆ, 7 ವರ್ಷಗಳ ಹಿಂದೆ ನಡೆದ ಗಣತಿ ಬಗ್ಗೆ ಅನುಮಾನ ಇದೆ. ಕೆಲವರು ಸರ್ಕಾರಿ ಸೌಲಭ್ಯಕ್ಕಾಗಿ ಜಾತಿ ಬಳಕೆ ಮಾಡುತ್ತಿದ್ದಾರೆ. ನಡೆದಿರುವ ಜಾತಿಗಣತಿಯ ಕುರಿತಾದ ಅನುಮಾನಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಿದ್ದು, ಅವರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.