ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಸಿರು ಪಟಾಕಿ ಮಾರಾಟ ಮಾಡದ ಪಟಾಕಿ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದಾರೆ.
ರಾಸಾಯನಿಕ ಪಟಾಕಿಯಿಂದ ಉಂಟಾಗುವ ಮಾಲಿನ್ಯ ತಡೆಗೆ ಹಸಿರು ಪಟಾಕಿ ಮಾತ್ರ ಬಳಕೆಗೆ ಉತ್ತೇಜಿಸಲಾಗಿದ್ದು, ದೀಪಾವಳಿ ಹಬ್ಬದಲ್ಲಿ ಪಟಾಕಿ ಮಾರಾಟಗಾರರು ಹಸಿರು ಪಟಾಕಿಗಳನ್ನು ಮಾತ್ರ ದಾಸ್ತಾನು, ಸಾಗಾಟ, ಮಾರಾಟ ಮಾಡುವ ಬಗ್ಗೆ ಆಯಾ ಜಿಲ್ಲಾಡಳಿತಗಳಿಗೆ ಮುಚ್ಚಳಿಕೆ ಬರೆದು ಕೊಡಬೇಕು. ನಿಯಮ ಉಲ್ಲಂಘಿಸಿದ್ದಲ್ಲಿ ಅಂತಹ ಪಟಾಕಿ ಮಾರಾಟಗಾರರಿಗೆ ಮುಂದಿನ ಸಾಲಿನಿಂದ ಮಳಿಗೆಗೆ ಅನುಮತಿ ನೀಡದಂತೆ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶಿಸಿದ್ದಾರೆ.
ಪಟಾಕಿ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಶಾಲಾ-ಕಾಲೇಜುಗಳು, ಪರಿಸರ ಪ್ರೇಮಿಗಳು, ಜನಪ್ರತಿನಿಧಿಗಳು, ಸಂಘ, ಸಂಸ್ಥೆಗಳು ಮುಂದಾಗಬೇಕು. ಪಟಾಕಿ ತ್ಯಜಿಸುವಂತೆ ಇಲ್ಲವೇ ಹಸಿರು ಪಟಾಕಿ ಮಾತ್ರ ಬಳಸುವಂತೆ ಮನವಿ ಮಾಡಬೇಕು. ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಎಲ್ಲರೂ ಸಹಕರಿಸಬೇಕೆಂದು ಸಚಿವರು ಹೇಳಿದ್ದಾರೆ.