ಬೀದರ್: ವನ್ಯಜೀವಿ ಉತ್ಪನ್ನ ವಾಪಸತಿಗೆ ಮೂರು ತಿಂಗಳ ಗಡುವು ನೀಡಲಾಗುವುದು. ಹೊಸ ಕಾನೂನು ಜಾರಿ ಬಗ್ಗೆ ನವೆಂಬರ್ 9 ರಂದು ನಡೆಯುವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಅರಿವಿಲ್ಲದೆ ವನ್ಯಜೀವಿ ವಸ್ತು ಹೊಂದಿದವರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ವನ್ಯಜೀವಿ ಅಂಗಾಂಗಗಳು, ಚರ್ಮ, ಕೊಂಬು, ಹಲ್ಲು ಮತ್ತಿತರ ವಸ್ತುಗಳನ್ನು ಅರಿವಿಲ್ಲದೆ ಬಳಸುತ್ತಿರುವವರಿಗೆ ಅಂತವುಗಳನ್ನು ಅರಣ್ಯ ಇಲಾಖೆಗೆ ವಾಪಸ್ ನೀಡಲು ಮೂರು ತಿಂಗಳು ಗಡುವು ನೀಡುವ ಕಾನೂನು ರೂಪಿಸಿ ಜಾರಿಗೆ ತರಲಾಗುವುದು. ನವೆಂಬರ್ 9 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈ ಕುರಿತಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಹಿರಿಯ ಅರಣ್ಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕರಡು ನಿಯಮಗಳನ್ನು ರಚಿಸಲಾಗುತ್ತಿದೆ. ಕಾನೂನು ಇಲಾಖೆಗೆ ಕಳುಹಿಸಿದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ಹೇಳಿದ್ದಾರೆ.
ಬೇಟೆ ಅಪರಾಧವಾಗಿದ್ದು, ಅದನ್ನು ಇಲಾಖೆಯವರು ತಡೆಯುತ್ತಾರೆ. ಅರಿವಿಲ್ಲದೆ ವನ್ಯಜೀವಿ ಉತ್ಪನ್ನ ಬಳಸುವವರ ಅನುಕೂಲಕ್ಕಾಗಿ ಕಾನೂನು ಜಾರಿಗೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.