ಬೆಂಗಳೂರು: ಕುದುರೆಮುಖ ಕಬ್ಬಿಣ ಅದಿರು ಕಂಪನಿ(ಕೆಐಒಸಿಎಲ್) ಗಣಿಗಾರಿಕೆ ವೇಳೆ ಷರತ್ತುಗಳನ್ನು ಉಲ್ಲಂಘಿಸಿದೆ. ಹೀಗಾಗಿ ಕೆಐಒಸಿಎಲ್ ಗೆ ಗಣಿಗಾರಿಕೆ ನಡೆಸಲು ಮಂಜೂರು ಮಾಡಲಾಗಿದ್ದ ದೇವದಾರಿ ಅರಣ್ಯ ಪ್ರದೇಶದ ಭೂಮಿ ಹಸ್ತಾಂತರ ತಡೆಹಿಡಿಯಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾದ ನಂತರ ಮೊದಲು ಸಹಿ ಹಾಕಿ ಅನುಮತಿ ಪ್ರಸ್ತಾವನೆಗೆ ಹಿನ್ನಡೆಯಾಗಿದೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ ಖಂಡ್ರೆ, ಕೆಐಒಸಿಎಲ್ ಕಂಪನಿಯವರು ಹಿಂದೆ ಗಣಿಗಾರಿಕೆ ನಡೆಸುವಾಗ ಅನೇಕ ಷರತ್ತು ಉಲ್ಲಂಘಿಸಿ ನಿಯಮ ಗಾಳಿಗೆ ತೂರಿದ್ದಾರೆ. ಹೀಗಾಗಿ ದಂಡ ವಿಧಿಸಲಾಗಿದೆ. ಕಂಪನಿ ಷರತ್ತು ಪೂರೈಸುವವರೆಗೂ ಗಣಿಗಾರಿಕೆ ನಡೆಸಲು 41 ಎಕರೆ ಭೂಮಿಯನ್ನು ಹಸ್ತಾಂತರಿಸಬಾರದು ಎಂದು ತಡೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.
ಕೆಐಒಸಿಎಲ್ ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದೆ. ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಿರಬಹುದು ಅಷ್ಟು ಮಾತ್ರ ಅವರ ಪಾತ್ರವಾಗಿದೆ. ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಭೂಮಿ ನೀಡುವಂತೆ ಕೆಐಒಸಿಎಲ್ 2018 ರ ಮಾರ್ಚ್ 16 ರಂದು ಮನವಿ ಸಲ್ಲಿಸಿತ್ತು. ಅದೇ ವರ್ಷ ಜುಲೈ 27ರಂದು ನೋಡಲ್ ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ್ದರು. 2020 ರ ಫೆಬ್ರವರಿ 18ರಂದು ಅರಣ್ಯ ಇಲಾಖೆ ಈ ವಿಚಾರವಾಗಿ ತನ್ನ ನಿಲುವನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದು ತಿಳಿಸಿದ್ದಾರೆ.
ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿದರೆ ನೈಸರ್ಗಿಕ ಕಾಡು ನಾಶವಾಗುತ್ತದೆ. ಜಲಮೂಲ ಹಾಗೂ ನೀರಿನ ಹರಿವಿಗೆ ಹಾನಿಯಾಗುವುದರಿಂದ ಗಣಿಗಾರಿಕೆಗೆ ಅನುಮೋದನೆ ನೀಡಬಾರದು ಎಂದು ವರದಿ ನೀಡಲಾಗಿದೆ. ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರು 2020ರ ಅಕ್ಟೋಬರ್ 9ರಂದು ಅರಣ್ಯಾಧಿಕಾರಿಗಳು ನೀಡಿದ ಅಭಿಪ್ರಾಯವನ್ನು ಬದಿಗೊತ್ತಿ ಮೊದಲ ಹಂತದ ಗಣಿಗಾರಿಕೆಗೆ ಅನುಮತಿ ನೀಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದರು.
2021ರ ಜೂನ್ 24ರಂದು ಕೆಲವು ಷರತ್ತುಗಳೊಂದಿಗೆ ಗಣಿಗಾರಿಕೆ ಪರವಾನಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಪ್ರಕ್ರಿಯೆಯಲ್ಲಿ ಹಲವು ಲೋಪಗಳು ಉಂಟಾಗಿರುವುದರಿಂದ ಭೂಮಿಯ ಹಸ್ತಾಂತರ ತಡೆಹಿಡಿಯಲಾಗಿದೆ ಎಂದು ಖಂಡ್ರೆ ತಿಳಿಸಿದ್ದಾರೆ.