ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲಿಕೊಪ್ಪ ಗ್ರಾಮದಲ್ಲಿ ಮಧ್ಯವಯಸ್ಸಿನ ವ್ಯಕ್ತಿ ಮತ್ತು ಮಹಿಳೆ ಪ್ರೀತಿಸಿದ್ದು ಗೋವಾಕ್ಕೆ ಪರಾರಿಯಾಗಿದ್ದಾರೆ. ಮಹಿಳೆಯ ಗಂಡ ದೂರು ನೀಡಿದ ಬೆನ್ನಲ್ಲೇ ಪೊಲೀಸರು ಕಾರ್ಯಪ್ರವೃತ್ತರಾಗಿ ಮೊಬೈಲ್ ಟ್ರೇಸ್ ಮಾಡಿ ಗೋವಾದಲ್ಲಿದ್ದ ಜೋಡಿಯನ್ನು ಕರೆದುಕೊಂಡು ಬಂದಿದ್ದಾರೆ.
ಊರಿಗೆ ಬರುತ್ತಿದ್ದಂತೆ ಮಹಿಳೆ ವರಸೆ ಬದಲಿಸಿದ್ದು, ನನಗೆ ಏನು ಗೊತ್ತಿಲ್ಲ ಎಂದು ಹೇಳಿದ್ದಾಳೆ. ಆಂಟಿಯನ್ನು ಪ್ರೀತಿಸಿದ ತಪ್ಪಿಗೆ ಟೈಲರ್ ವಿರುದ್ಧ ಅತ್ಯಾಚಾರ, ಅಪಹರಣ ಸೇರಿ ಹಲವು ಪ್ರಕರಣ ದಾಖಲಾಗಿದ್ದು ಆತನನ್ನು ಬಂಧಿಸಲಾಗಿದೆ.
ಹುಬ್ಬಳ್ಳಿ ತಾಲೂಕಿನ ಪಾಲಿಕೊಪ್ಪ ಗ್ರಾಮದ ಹೆಸರುವಾಸಿಯಾಗಿರುವ ಟೈಲರ್ ಗೆ 42 ವರ್ಷ. ಎತ್ತರಕ್ಕೆ ಬೆಳೆದ ಮಕ್ಕಳಿದ್ದಾರೆ. ಈ ನಡುವೆ ಪತ್ನಿ ಮಕ್ಕಳಿಂದ ದೂರವಾಗಿದ್ದ ಟೈಲರ್ ಅದೇ ಊರಿನ 35 ವರ್ಷದ ಮಹಿಳೆಯನ್ನು ಬಲೆಗೆ ಬೆಳೆಸಿಕೊಂಡಿದ್ದಾನೆ. ಆಗಾಗ ಮಹಿಳೆ ಮನೆಗೆ ಹೋಗಿ ಬರುತ್ತಿದ್ದನೆನ್ನಲಾಗಿದೆ.
ಕಳೆದ ತಿಂಗಳು ಇಬ್ಬರು ಗೋವಾಕ್ಕೆ ಪರಾರಿಯಾಗಿದ್ದು, ಮಹಿಳೆಯ ಗಂಡ ಹುಬ್ಬಳ್ಳಿ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಗೋವಾದಿಂದ ಕರೆದುಕೊಂಡು ಬಂದಿದ್ದಾರೆ. ಆಗ ಮಹಿಳೆ ಉಲ್ಟಾ ಹೊಡೆದಿದ್ದು, ತನಗೇನೂ ಗೊತ್ತಿಲ್ಲ. ಟೈಲರ್ ಕರೆದುಕೊಂಡು ಹೋಗಿರುವುದಾಗಿ ಹೇಳಿದ್ದಾರೆ. ಪಾಪ ಟೈಲರ್ ಜೈಲು ಸೇರಿದ್ದಾನೆ ಎಂದು ಹೇಳಲಾಗಿದೆ.