ಉದ್ಯೋಗ ಬದಲಿಸಿದ ನಂತ್ರ ಕೆಲ ಜನರು ತಮ್ಮ ಪಿಎಫ್ ಖಾತೆಯಲ್ಲಿರುವ ಹಣವನ್ನು ವಿತ್ ಡ್ರಾ ಮಾಡಿಕೊಂಡ್ರೆ ಮತ್ತೆ ಕೆಲವರು ಅದನ್ನು ವರ್ಗಾಯಿಸಿಕೊಳ್ತಾರೆ. ಕೆಲವೊಮ್ಮೆ ಹಳೆ ಕಂಪನಿ, ಕೆಲಸ ಬಿಟ್ಟ ದಿನಾಂಕವನ್ನು ನಮೂದಿಸಲು ಮರೆತಿರುತ್ತದೆ. ಇಂಥ ಸಂದರ್ಭದಲ್ಲಿ ಉದ್ಯೋಗಿಯ ಪಿಎಫ್ ಖಾತೆಯನ್ನು ವರ್ಗಾಯಿಸಿಕೊಳ್ಳುವುದು ಕಷ್ಟವಾಗುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್‌ಒ, ಉದ್ಯೋಗಿಗಳ ಈ ಸಮಸ್ಯೆ ಹೋಗಲಾಡಿಸಲು ಮುಂದಾಗಿದೆ.
ಈ ಹಿಂದೆ, ಉದ್ಯೋಗದಾತರಿಗೆ ಮಾತ್ರ, ಉದ್ಯೋಗಿ ಆಗಮನ ಹಾಗೂ ನಿರ್ಗಮದ ದಿನಾಂಕವನ್ನು ಸೇರಿಸುವ ಅಧಿಕಾರವಿತ್ತು. ಆದ್ರೀಗ ಇಪಿಎಫ್ಒ ತನ್ನ ಸದಸ್ಯರಿಗೆ ಈ ಸೌಲಭ್ಯವನ್ನು ನೀಡುತ್ತಿದೆ. ಸ್ವತಃ ಉದ್ಯೋಗಿಯೇ, ಉದ್ಯೋಗ ತೊರೆದ ದಿನಾಂಕವನ್ನು ನಮೂದಿಸಬಹುದು. ಇದ್ರಿಂದ ಹಣ ವರ್ಗಾವಣೆ ಅಥವಾ ಹಣ ವಿತ್ ಡ್ರಾ ಸುಲಭವಾಗಲಿದೆ.
ಮನೆಯಲ್ಲಿಯೇ ಆನ್ಲೈನ್ ನಲ್ಲಿ, ಕೆಲಸ ಬಿಟ್ಟ ದಿನಾಂಕವನ್ನು ನಮೂದಿಸಬಹುದು. ಮೊದಲು https://unifiedportal-mem.epfindia.gov.in/memberinterface/ ಗೆ ಹೋಗಿ, ಯುಎಎನ್, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ ಲಾಗ್ ಇನ್ ಆಗಬೇಕು. ಆಗ ಹೊಸ ಪುಟ ತೆರೆಯುತ್ತದೆ. ಮೇಲ್ಭಾಗದಲ್ಲಿರುವ ಮ್ಯಾನೇಜ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಮಾರ್ಕ್ ಎಕ್ಸಿಟ್ ಮೇಲೆ ಕ್ಲಿಕ್ ಮಾಡಬೇಕು. ಡ್ರಾಪ್‌ಡೌನ್‌ನಲ್ಲಿ ಆಯ್ದ ಉದ್ಯೋಗ ಕಾಣುತ್ತದೆ. ಅಲ್ಲಿ ಯುಎಎನ್ ಗೆ ಲಿಂಕ್ ಮಾಡಲಾಗಿರುವ ಹಳೆಯ ಪಿಎಫ್ ಖಾತೆ ಸಂಖ್ಯೆಯನ್ನು ನಮೂದಿಸಬೇಕು. ಆ ಖಾತೆ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ವಿವರ ಸಿಗಲಿದೆ. ಕೆಲಸ ಬಿಡುವ ದಿನಾಂಕ ಮತ್ತು ಕಾರಣವನ್ನು ನಮೂದಿಸಬೇಕು. ಇದರ ನಂತರ ರಿಕ್ವೆಸ್ಟ್ ಒಟಿಪಿ ಮೇಲೆ ಕ್ಲಿಕ್ ಮಾಡಿ. ಒಟಿಪಿ ನಮೂದಿಸಿದ ನಂತ್ರ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಬೇಕು. ಕೊನೆಯದಾಗಿ ಅಪ್‌ಡೇಟ್ ಮೇಲೆ ಕ್ಲಿಕ್ ಮಾಡಿ.
ಅಪ್‌ಡೇಟ್ ಮಾಡುವಾಗ ಹೆಚ್ಚಿನ ಕಾಳಜಿ ಅಗತ್ಯವಿದೆ. ಒಮ್ಮೆ ನಮೂದಿಸಿದ ದಿನಾಂಕವನ್ನು ನಂತರ ಎಡಿಟ್ ಮಾಡಲು ಸಾಧ್ಯವಿಲ್ಲ.