ನೌಕರರ ಭವಿಷ್ಯ ನಿಧಿ ಸಂಸ್ಥೆ, ಆನ್ಲೈನ್ ಸೇವೆ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ಸದಸ್ಯರಿಗೆ ಆನ್‌ಲೈನ್ ಮಾಧ್ಯಮದ ಮೂಲಕ ಪ್ರೊಫೈಲ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಅನುಮತಿ ನೀಡುವುದಿಲ್ಲ. ಆನ್‌ಲೈನ್ ಮೂಲಕ ಪ್ರೊಫೈಲ್ ತಿದ್ದುಪಡಿ ಮಾಡಿದ್ರೆ ದಾಖಲೆಗಳು ಹೊಂದಿಕೆಯಾಗದಿರುವ ಸಾಧ್ಯತೆಯಿದೆ. ಇದು ವಂಚನೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಈ ಸಂಬಂಧ ಇಪಿಎಫ್‌ಒ ಪ್ರಾದೇಶಿಕ ಕಚೇರಿಗಳು ಮತ್ತು ಸದಸ್ಯ ಸಂಸ್ಥೆಗಳಿಗೆ ಈಗಾಗಲೇ ಸುತ್ತೋಲೆ ಹೊರಡಿಸಿದೆ. ಯಾವುದೇ ಕಾಗದದ ಪುರಾವೆ ಇಲ್ಲದೆ, ಯಾವುದೇ ನೌಕರ ದಾಖಲೆಯನ್ನು ತಿದ್ದಬಾರದು ಎಂದು ಈ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
2020 ರಲ್ಲಿ ಇಂತಹ ಅನೇಕ ಪ್ರಕರಣಗಳು ಕಂಡುಬಂದಿವೆ. ಈ ಕಾರಣದಿಂದಾಗಿ ಇಪಿಎಫ್‌ಒ ಸುಮಾರು ಶೇಕಡಾ 10ರಷ್ಟು ಚಂದಾದಾರರಿಗೆ ಬಡ್ಡಿ ನೀಡುವುದನ್ನು ನಿಲ್ಲಿಸಿದೆ. ಉದ್ಯೋಗಿಗಳು ಮತ್ತು ಉದ್ಯೋಗದಾತರು ಲೆಕ್ಕಪರಿಶೋಧನೆಗೆ ನೀಡಿದ ಪುರಾವೆಗಳನ್ನು ಸಂರಕ್ಷಿಸುವಂತೆ ಇಪಿಎಫ್‌ಒ ತನ್ನ ಪ್ರಾದೇಶಿಕ ಕಚೇರಿಗಳಿಗೆ ನಿರ್ದೇಶನ ನೀಡಿದೆ.
ಸಾಮಾನ್ಯ ಪರಿಸ್ಥಿತಿಯಲ್ಲಿ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಯಾವುದೇ ಸದಸ್ಯರ ಪ್ರೊಫೈಲ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ. ಆದ್ರೆ ಬಹಳ ಮುಖ್ಯವಾದ ಪರಿಸ್ಥಿತಿಯಲ್ಲಿ ಕಾನೂನು ನಿಬಂಧನೆಯಡಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. ಉದ್ಯೋಗದಾತ ತಪ್ಪು ಡೇಟಾವನ್ನು ಅಪ್‌ಲೋಡ್ ಮಾಡಿದ್ದರೆ, ಅದನ್ನು ಪುರಾವೆಗಳೊಂದಿಗೆ ಸುಧಾರಿಸಬಹುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.