ನವದೆಹಲಿ: ನೌಕರರ ಪಿಂಚಣಿ (ತಿದ್ದುಪಡಿ) ಯೋಜನೆ, 2014 ‘ಕಾನೂನುಬದ್ಧ ಮತ್ತು ಮಾನ್ಯವಾಗಿದೆ’ ಎಂದು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು, ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಸರ್ಕಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಹೇಳಿದೆ. ಈ ಕುರಿತು ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವ ರಾಮೇಶ್ವರ್ ತೇಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ನೌಕರರ ಪಿಂಚಣಿ ಯೋಜನೆ (ಇಪಿಎಸ್) 1995ರ ಅಡಿ ‘ಪಿಂಚಣಿಯೋಗ್ಯ ಸಂಬಳದ ನಿರ್ಣಯ’ದ ಮೇಲಿನ 2014ರ ತಿದ್ದುಪಡಿಗಳನ್ನು ಕೇರಳ, ರಾಜಸ್ಥಾನ ಮತ್ತು ದಿಲ್ಲಿ ಹೈಕೋರ್ಟ್‌ಗಳು ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ನೌಕರರ ಭವಿಷ್ಯನಿಧಿ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಉದಯ್ ಯು ಲಲಿತ್ ಅವರ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ತೀರ್ಪು ನೀಡಿತ್ತು. ಇದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಯೋಜನೆಯು ಅರ್ಹ ಉದ್ಯೋಗಿಗಳಿಗೆ ವರ್ಧಿತ ಪಿಂಚಣಿ ಆಯ್ಕೆ ಮಾಡಲು ನಾಲ್ಕು ತಿಂಗಳ ಕಾಲಾವಕಾಶವನ್ನು ಒದಗಿಸಿದೆ ಎಂದು ಅವರು ಹೇಳಿದರು.
2014ರ ಇಪಿಎಸ್ ತಿದ್ದುಪಡಿಯಲ್ಲಿ ಪ್ಯಾರಾಗ್ರಾಫ್ 11 (3) ಬದಲಾವಣೆ ಹಾಗೂ ಪ್ಯಾರಾಗ್ರಾಫ್ 11 (4) ಅಳವಡಿಕೆ ಮಾಡಲಾಗಿತ್ತು. ಇದರಲ್ಲಿ ವೇತನ ಮಿತಿಯನ್ನು 6,500 ರೂ. ದಿಂದ 15,000 ರೂ. ಗೆ ಹೆಚ್ಚಿಸಲಾಗಿತ್ತು. 2014ರ ಸೆ.1ರ ವೇಳೆ ಹಾಲಿ ಇಪಿಎಸ್ ಸದಸ್ಯರಾಗಿರುವ ಉದ್ಯೋಗಿಗಳು ಮಾತ್ರವೇ ತಮ್ಮ ವಾಸ್ತವ ಸಂಬಳಗಳಿಗೆ ಅನುಗುಣವಾಗಿ ಪಿಂಚಣಿ ನಿಧಿಗೆ ಕೊಡುಗೆ ಮುಂದುವರಿಸಬಹುದಾಗಿದೆ. ಹೊಸ ಪಿಂಚಣಿ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲು ಆರು ತಿಂಗಳ ಗವಾಕ್ಷಿಯನ್ನು ಅವರಿಗೆ ನೀಡಲಾಗಿದೆ.