ಕೊರೊನಾ ಕಾಲದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಅಚಾನಕ್ ಹಣದ ಅಗತ್ಯತೆ ಬಿದ್ರೆ ಏನ್ಮಾಡ್ಬೇಕು ಎಂದು ಆಲೋಚನೆಗೆ ಬಿದ್ದವರಿಗೆ ಮಹತ್ವದ ಮಾಹಿತಿಯೊಂದಿದೆ. ನೌಕರರ ಭವಿಷ್ಯ ನಿಧಿ ಸದಸ್ಯರಿಗೆ ಈಗ ಹೊಸ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಆಸ್ಪತ್ರೆಗೆ ದಾಖಲಾದ ಕೂಡಲೇ 1 ಲಕ್ಷ ರೂಪಾಯಿ ಸಿಗಲಿದೆ.
ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಇಪಿಎಫ್ ಸದಸ್ಯರು ತಮ್ಮ ಪಿಎಫ್ ಬಾಕಿಯಿಂದ 1 ಲಕ್ಷ ರೂಪಾಯಿ ಪಡೆಯಬಹುದು. ಜೂನ್ 1 ರಂದು ಇಪಿಎಫ್ಒ ಸುತ್ತೋಲೆ ಹೊರಡಿಸಿತ್ತು. ಇದರಲ್ಲಿ ಕೊರೊನಾ ಸೇರಿದಂತೆ ಯಾವುದೇ ಮಾರಕ ಕಾಯಿಲೆಗೆ ಚಿಕಿತ್ಸೆ ನೀಡಲು ಹಠಾತ್ ಆಸ್ಪತ್ರೆಗೆ ದಾಖಲಾದರೆ 1 ಲಕ್ಷ ರೂಪಾಯಿಗಳ ವೈದ್ಯಕೀಯ ಮುಂಗಡವನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.
ಈ ಮೊದಲು ವೈದ್ಯಕೀಯ ತುರ್ತು ಸ್ಥಿತಿಗಾಗಿ ಇಪಿಎಫ್ ಖಾತೆಯಿಂದ ಮುಂಗಡ ತೆಗೆದುಕೊಳ್ಳಲು ಇಪಿಎಫ್ಒ ಅನುಮತಿ ನೀಡಿತ್ತು. ಆದರೆ ಈ ಮೊತ್ತವು ವೆಚ್ಚದ ಅಂದಾಜಿನ ಆಧಾರದ ಮೇಲೆ ಅಥವಾ ವೈದ್ಯಕೀಯ ಬಿಲ್ಗಳನ್ನು ಮರುಪಾವತಿ ಮಾಡಿದ ನಂತರವೇ ಲಭ್ಯವಿತ್ತು. ಆದರೆ ಈ ವೈದ್ಯಕೀಯ ಮುಂಗಡವು ಇದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಇಪಿಎಫ್ ಸದಸ್ಯರಿಗೆ ಯಾವುದೇ ಬಿಲ್ ಅಥವಾ ಅಂದಾಜು ವೆಚ್ಚವನ್ನು ತೋರಿಸುವ ಅಗತ್ಯವಿಲ್ಲ. ಕೇವಲ ಅಪ್ಲಿಕೇಷನ್ ಹಾಕಿ ಮೊತ್ತವನ್ನು ಪಡೆಯಬಹುದು.
ಉದ್ಯೋಗಿ ಅಥವಾ ಯಾವುದೇ ಕುಟುಂಬದ ಸದಸ್ಯರು ಆಸ್ಪತ್ರೆ ಮತ್ತು ರೋಗಿಯ ವಿವರಗಳನ್ನು ಅರ್ಜಿಯಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಒಂದು ಗಂಟೆಯೊಳಗೆ ಈ ಮೊತ್ತ ಸಿಗುತ್ತದೆ.