
ಬೆಂಗಳೂರು: ಬೆಂಗಳೂರಿನ ಯಲಹಂಕ ಏರ್ ಫೋರ್ಸ್ ಸ್ಟೇಷನ್ ನಲ್ಲಿ ಫೆಬ್ರವರಿ 10ರಿಂದ 14 ರವರೆಗೆ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಶೋ ನಡೆಯಲಿದೆ.
ಯುದ್ಧ ವಿಮಾನಗಳ ಹಾರಾಟ ಪ್ರದರ್ಶನ ವೀಕ್ಷಿಸಲು ಸಾರ್ವಜನಿಕರಿಗೆ ಒಂದು ಸಾವಿರ ರೂಪಾಯಿ ಶುಲ್ಕ ನಿಗದಿಪಡಿಸಲಾಗಿದ್ದು, ಆನ್ಲೈನ್ ನಲ್ಲಿ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ.
ಫೆಬ್ರವರಿ 10ರಂದು ಉದ್ಘಾಟನಾ ಸಮಾರಂಭ ಇರುವುದರಿಂದ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಶುಲ್ಕ ಪಾವತಿಸಿ ಟಿಕೆಟ್ ಖರೀದಿಸಿದವರು ಫೆಬ್ರವರಿ 11 ರಿಂದ 14ರ ವರೆಗೆ ನಾಲ್ಕು ದಿನಗಳಲ್ಲಿ ಯಾವುದಾದರೂ ಒಂದು ದಿನ ಏರ್ ಡಿಸ್ ಪ್ಲೇ ಏರಿಯಾಗೆ ತೆರಳಿ ಪ್ರದರ್ಶನ ವೀಕ್ಷಿಸಬಹುದು. ಬೆಳಗ್ಗೆ ಮತ್ತು ಮಧ್ಯಾಹ್ನದ ಅವಧಿ ಸೇರಿ ನಿತ್ಯ ಎರಡು ಬಾರಿ ಪ್ರದರ್ಶನ ಇರುತ್ತದೆ. ವಿದೇಶಿಯರಿಗೆ 50 ಯುಎಸ್ ಡಾಲರ್ ಶುಲ್ಕ ನಿಗದಿಪಡಿಸಲಾಗಿದೆ.
ಏರೋ ಇಂಡಿಯಾದಲ್ಲಿ 140ಕ್ಕೂ ಅಧಿಕ ವಿದೇಶಿ ರಕ್ಷಣಾ ಉತ್ಪನ್ನಗಳ ಉತ್ಪಾದಕ ಕಂಪನಿಗಳು ನೋಂದಣಿ ಮಾಡಿಕೊಂಡಿವೆ. ಮಿಲಿಟರಿ ಮತ್ತು ಮಿಲಿಟರಿ ಸರಕು ಸಾಗಾಣೆ ವಿಮಾನ, ಶಸ್ತ್ರಾಸ್ತ್ರ, ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳು ಭಾಗವಹಿಸಲಿವೆ. ವಿವಿಧ ದೇಶಗಳ ಯುದ್ಧ ವಿಮಾನಗಳು, ಸರಕು ಸಾಗಣೆ, ನಾಗರಿಕ ವಿಮಾನ, ಐಷಾರಾಮಿ ವಿಮಾನ ಕಂಪನಿಗಳು ಕೂಡ ಭಾಗವಹಿಸಲಿವೆ.