ಚಿಕ್ಕಮಗಳೂರು: ಬಾಬಾ ಬುಡನ್ ಗಿರಿಗೆ ಪ್ರವಾಸಿಗರಿಗೆ ಡಿಸೆಂಬರ್ 11ರಿಂದ 5 ದಿನ ಪ್ರವೇಶ ನಿರ್ಬಂಧಿಸಲಾಗಿದೆ.
ದತ್ತ ಜಯಂತಿ ಅಂಗವಾಗಿ ಜನಜಂಗುಳಿ ನಿಯಂತ್ರಿಸುವ ಉದ್ದೇಶದಿಂದ ಡಿಸೆಂಬರ್ 11 ರಿಂದ 15 ರವರೆಗೆ ಬಾಬಾ ಬುಡನ್ ಗಿರಿಗೆ ಪ್ರವಾಸಿಗರು ಆಗಮಿಸದಂತೆ ನಿರ್ಬಂಧ ವಿಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಡಿಸೆಂಬರ್ 12 ರಿಂದ 14ರವರೆಗೆ ದತ್ತ ಜಯಂತಿ ನಡೆಯಲಿದ್ದು, ಸಾವಿರಾರು ಭಕ್ತರು ವಾಹನಗಳಲ್ಲಿ ಆಗಮಿಸುತ್ತಾರೆ. ಇಲ್ಲಿನ ರಸ್ತೆ ತುಂಬಾ ಕಿರಿದಾಗಿದ್ದು, ಪ್ರಸಕ್ತ ವರ್ಷದಲ್ಲಿ ಸುರಿದ ಮಳೆ ಭೂಕುಸಿತ ಉಂಟಾಗಿ ರಸ್ತೆ ಹಾಳಾಗಿದೆ. ಹೀಗಾಗಿ ಪ್ರವಾಸಿಗರು, ಯಾತ್ರಿಗಳು ಡಿಸೆಂಬರ್ 11 ರ ಬೆಳಗ್ಗೆ 6 ರಿಂದ 15 ರ ಬೆಳಗ್ಗೆ 6ರವರೆಗೆ ಭೇಟಿ ನೀಡಬಾರದು ಎಂದು ಹೇಳಲಾಗಿದೆ.