ಚಳಿಗಾಲ ಮತ್ತು ಮಳೆಗಾಲದಲ್ಲಿ ಬಿಸಿ ಬಿಸಿ ಚಹಾ ಜೊತೆಗೆ ಪಕೋಡಾ ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಎಲೆಕೋಸು ಪಕೋಡಾ, ಆಲೂಗಡ್ಡೆ ಪಕೋಡಾ, ಪನೀರ್ ಪಕೋಡಾ, ಚಿಲ್ಲಿ ಪಕೋಡಾ ಹೀಗೆ ಇದರಲ್ಲಿ ನಾನಾ ವೆರೈಟಿಗಳಿವೆ. ಆದರೆ ಚಪಾತಿ ಪಕೋಡಾವನ್ನು ಎಂದಾದರೂ ಟೇಸ್ಟ್ ಮಾಡಿದ್ದೀರಾ? ರಾತ್ರಿ ಮಾಡಿದ ಚಪಾತಿ ಉಳಿದಿದ್ದರೆ ಅದರಿಂದ್ಲೂ ಗರಿಗರಿ ಪಕೋಡಾ ಮಾಡಬಹುದು.
ಚಪಾತಿ ಪಕೋಡಾ ಮಾಡಲು ಬೇಕಾಗುವ ಸಾಮಗ್ರಿ: ಮಧ್ಯಮ ಗಾತ್ರದ ಆಲೂಗಡ್ಡೆ 2-3, ಹೆಚ್ಚಿದ ಕೊತ್ತಂಬರಿ ಸೊಪ್ಪು-1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಚಿಲಿ ಫ್ಲೇಕ್ಸ್ 1 ಟೀ ಸ್ಪೂನ್, ಕೆಂಪು ಮೆಣಸಿನ ಪುಡಿ 1/2 ಟೀಸ್ಪೂನ್, ಸಣ್ಣದಾಗಿ ಹೆಚ್ಚಿದ ಹಸಿ ಮೆಣಸಿನಕಾಯಿ ಸ್ವಲ್ಪ, ಕಾಲು ಚಮಚ ಓಮ, ಕಡಲೆ ಹಿಟ್ಟು 4 ಚಮಚ, ಅರ್ಧ ಚಮಚ ಜೀರಿಗೆ, ಚಿಟಿಕೆ ಅರಿಶಿನ ಪುಡಿ, ಕರಿಯಲು ಎಣ್ಣೆ, 1 ಕಪ್ ನೀರು.
ಚಪಾತಿ ಪಕೋಡ ಮಾಡುವ ವಿಧಾನ: ಮೊದಲು ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಮ್ಯಾಶ್ ಮಾಡಿಕೊಳ್ಳಿ. ಅದಕ್ಕೆ ಕೊತ್ತಂಬರಿ ಸೊಪ್ಪು, ಉಪ್ಪು, ಮೆಣಸಿನ ಪುಡಿ, ಚಿಲ್ಲಿ ಫ್ಲೇಕ್ಸ್, ಹಸಿ ಮೆಣಸಿನಕಾಯಿ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇನ್ನೊಂದು ಬೌಲ್‌ನಲ್ಲಿ ಕಡಲೆಹಿಟ್ಟು, ಜೀರಿಗೆ, ಓಮ, ಅರಿಶಿನ ಎಲ್ಲವನ್ನೂ ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಬೆರೆಸಿಕೊಳ್ಳಿ. ಪಕೋಡಾ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಚಪಾತಿ ತೆಗೆದುಕೊಂಡು ಆಲೂ ಮಿಶ್ರಣವನ್ನು ಚಪಾತಿ ಮೇಲೆ ಹರಡಿ, ಅದನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ. ಒಂದೊಂದನ್ನೇ ಮಡಿಸಿ ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ಹೊಂಬಣ್ಣ ಬರುವವರೆಗೂ ಕರಿದರೆ ಬಿಸಿ ಬಿಸಿ ಪಕೋಡಾ ಸವಿಯಲು ಸಿದ್ಧ. ಚಪಾತಿ ಪಕೋಡಾವನ್ನು ಕೆಚಪ್ ಅಥವಾ ಗ್ರೀನ್ ಚಟ್ನಿಯೊಂದಿಗೆ ಸರ್ವ್ ಮಾಡಿ.