ಕೆಲವು ತಿನಿಸುಗಳನ್ನು ಎಷ್ಟು ತಿಂದರೂ ಮತ್ತೆ ಮತ್ತೆ ತಿನ್ನಬೇಕು ಎಂದು ಅನ್ನಿಸುತ್ತಲೇ ಇರುತ್ತದೆ. ಅದರಲ್ಲಿಯೂ ಸಾಯಂಕಾಲದ ಸಮಯದಲ್ಲಿ ಕಾಫಿ-ಟೀ ಜೊತೆಗೆ ಏನಾದರೂ ತಿನ್ನಬೇಕು ಎಂದು ಅನ್ನಿಸುವುದೂ ಉಂಟು.
ಅಂತಹ ಸಮಯದಲ್ಲಿ ಬೋಂಡಾ, ಚಿಪ್ಸ್ ನಂತಹ ಕುರುಕುಲು ತಿಂಡಿಗಳನ್ನು ಮಾಡಿಕೊಂಡು ಸವಿಯಬಹುದು. ಈಗ ಹಲಸಿನ ಸೀಸನ್ ಆಗಿರುವುದರಿಂದ ಹಲಸಿನಕಾಯಿ ಬೋಂಡಾವನ್ನು ತಯಾರಿಸುವುದು ಹೇಗೆ ಅಂತ ನೋಡೋಣ.
ಬೇಕಾಗುವ ಸಾಮಾಗ್ರಿಗಳು
ಬೇಯಿಸಿದ ಹಲಸಿನಕಾಯಿ 1 ಕಪ್
ಅಕ್ಕಿ ಹಿಟ್ಟು 1/4 ಕಪ್
ಕಡಲೆಹಿಟ್ಟು 1/2 ಕಪ್
ಜೀರಿಗೆ 1 ಚಮಚ
ಅರಿಶಿಣಪುಡಿ 1/2 ಚಮಚ
ಈರುಳ್ಳಿ 1
ಖಾರದಪುಡಿ 1 ಚಮಚ
ಕೊತ್ತಂಬರಿ ಸೊಪ್ಪು 1/4 ಕಟ್ಟು
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಕರಿಯಲು ಬೇಕಾದಷ್ಟು
ಮಾಡುವ ವಿಧಾನ
ಮೊದಲಿಗೆ ಹಲಸಿನಕಾಯಿಯ ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿಕೊಂಡು ಬೇಯಿಸಿಕೊಳ್ಳಬೇಕು. ನಂತರ ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಹೆಚ್ಚಿಟ್ಟುಕೊಳ್ಳಬೇಕು.
ನಂತರ ಒಂದು ಬೌಲ್‌ನಲ್ಲಿ ಬೇಯಿಸಿಕೊಂಡ ಹಲಸಿನಕಾಯಿಯನ್ನು ನುರಿಯಬೇಕು.
ನಂತರ ಅದಕ್ಕೆ ತಕ್ಕಷ್ಟು ಕಡಲೆಹಿಟ್ಟು, ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಬೇಕು. ನಂತರ ಜೀರಿಗೆ, ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಖಾರದಪುಡಿ, ಉಪ್ಪು, ಅರಿಶಿಣ ಪುಡಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಬೇಕು.
ನಂತರ ಕಲಸಿದ ಮಿಶ್ರಣವನ್ನು ಬೋಂಡಾ ಗಾತ್ರದಲ್ಲಿ ಉಂಡೆಯನ್ನು ಕಟ್ಟಿಕೊಳ್ಳಬೇಕು. ನಂತರ ಎಣ್ಣೆ ಕಾದ ಮೇಲೆ ಬೋಂಡಾ ಉಂಡೆಗಳನ್ನು ಹಾಕಿ ಕೆಂಪಗೆ ಕರಿದರೆ ರುಚಿಕರವಾದ ಹಲಸಿನಕಾಯಿ ಬೋಂಡಾ ಸವಿಯಲು ಸಿದ್ಧ.