ಆಧುನಿಕ ಜೀವನಶೈಲಿಯಿಂದ ಆಹಾರ ಪದ್ಧತಿಯಲ್ಲೂ ಅನೇಕ ಬದಲಾವಣೆಗಳಾಗಿವೆ. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎನ್ನುವಂತೆ, ಹಿಂದಿನ ಕಾಲದ ಜನರಿಗೆ ಊಟದ ಗುಟ್ಟು ತಿಳಿದಿತ್ತು. ಆರೋಗ್ಯದ ಬಗ್ಗೆಯೂ ಗೊತ್ತಿತ್ತು.
ಆರ್ಕ, ನವಣೆ, ಸಾಮೆ, ಕೊರ್ಲೆ, ಊದಲುಗಳನ್ನು ಪಂಚರತ್ನ ಸಿರಿಧಾನ್ಯಗಳೆಂದು ಕರೆಯುತ್ತಾರೆ. ಸಜ್ಜೆ, ರಾಗಿ, ಜೋಳ ಕೂಡ ಇದೇ ಸಾಲಿಗೆ ಸೇರುತ್ತವೆ. ಸಿರಿಧಾನ್ಯಗಳನ್ನು ಬಳಸುವುದರಿಂದ ಆರೋಗ್ಯ ಸುಧಾರಿಸುತ್ತದೆ ಎನ್ನುತ್ತಾರೆ ತಿಳಿದವರು.
ಇಂತಹ ಸಿರಿ ಧಾನ್ಯ ಬಳಸಿ ಸಿರಿ ಪಾಯಸವನ್ನು ಮಾಡುವ ವಿಧಾನ ಇಲ್ಲಿದೆ. 100 ಗ್ರಾಂ ಯಾವುದಾದರೂ ಸಿರಿಧಾನ್ಯವೊಂದನ್ನು ಒಂದೆರಡು ಚಮಚ ಹೆಸರುಬೇಳೆ ಇಲ್ಲವೇ ಕಡಲೇಬೇಳೆಯೊಂದಿಗೆ ಚೆನ್ನಾಗಿ ಹುರಿಯಬೇಕು.
ನೀರನ್ನು ಬೆರೆಸಿ ಚೆನ್ನಾಗಿ ಬೇಯಿಸಬೇಕು. ಇದರ ಜೊತೆಗೆ ಸ್ವಲ್ಪ ಗಸಗಸೆ, ಕೊಬ್ಬರಿ ತುರಿ ಹಾಕಬೇಕು. ಪ್ರತ್ಯೇಕವಾಗಿ ಬೆಲ್ಲಕ್ಕೆ ನೀರು ಹಾಕಿ ಕುದಿಸಿ, ಬೆಲ್ಲದ ಪಾಕವನ್ನು ಮೊದಲೇ ಮಾಡಿಟ್ಟುಕೊಂಡ, ಸಿರಿಧಾನ್ಯದ ಅಕ್ಕಿ ಮುಂತಾದವುಗಳನ್ನು ಹಾಕಿ ಮಿಶ್ರಣ ಮಾಡಿರಿ. ತುಪ್ಪ, ಏಲಕ್ಕಿಯನ್ನು ಬೇಕೆನಿಸಿದಲ್ಲಿ ಗೋಡಂಬಿ, ದ್ರಾಕ್ಷಿ ಹಾಕಬಹುದು. ಆಗ ಸಿರಿಪಾಯಸ ರೆಡಿಯಾಗುತ್ತದೆ.