ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಸೂಚನೆ ನೀಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಆಸಕ್ತ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಆಂಗ್ಲಮಾಧ್ಯಮದ ಹೆಚ್ಚುವರಿ ವಿಭಾಗ ನಡೆಸಬೇಕೆಂದು ಹೇಳಲಾಗಿದೆ.
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಹೆಚ್ಚುವರಿಯಾಗಿ ಆಂಗ್ಲಮಾಧ್ಯಮ ಆರಂಭಿಸುವಂತೆ ಸೂಚನೆ ನೀಡಿ ಮಾರ್ಗಸೂಚಿ ಕೂಡ ಬಿಡುಗಡೆ ಮಾಡಲಾಗಿದೆ.
ಆರು ಮತ್ತು ಏಳನೇ ತರಗತಿಗೆ ಆಂಗ್ಲಮಾಧ್ಯಮ ಹೆಚ್ಚುವರಿ ವಿಭಾಗ ತೆರೆಯುವ ಕುರಿತಂತೆ ಶಿಕ್ಷಕರು, ಎಸ್ಡಿಎಂಸಿ ಅಭಿಪ್ರಾಯ ಪಡೆಯಬೇಕು. ಪೋಷಕರಿಂದ ಒಪ್ಪಿಗೆ ಪಡೆಯಬೇಕು. ಪ್ರತಿ ಶಾಲೆ ಕನಿಷ್ಠ ಇಬ್ಬರು ಶಿಕ್ಷಕರಿಗೆ ಆಂಗ್ಲ ಭಾಷಾ ತರಬೇತಿ ಪಡೆದಿರಬೇಕು. ಶಾಲೆಗಳಲ್ಲಿ ಇರುವ ಕಟ್ಟಡ, ಮೂಲಸೌಕರ್ಯ, ತರಗತಿ ಕೊಠಡಿ ಬಳಸಿಕೊಂಡು ಆಂಗ್ಲಮಾಧ್ಯಮ ಹೆಚ್ಚುವರಿ ವಿಭಾಗ ನಡೆಸಬೇಕು. ಮೂಲಸೌಕರ್ಯ, ಕೊಠಡಿ ನಿರ್ಮಾಣ, ಶೌಚಾಲಯ ಸೌಲಭ್ಯಗಳು ಬೇಕಾದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ, ಜನಪ್ರತಿನಿಧಿಗಳ ಅನುದಾನ, ದಾನಿಗಳ ನೆರವಿನಿಂದ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಲಾಗಿದೆ.