ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಕ್ತಾಯ ಹಂತಕ್ಕೆ ಸಾಗುತ್ತಿರುವ ಹೊತ್ತಲ್ಲಿ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕೆಲ್ ವಾಘನ್ ಭಾರತದ ಪ್ರವಾಸದಲ್ಲಿದ್ದು, ಮುಂಬೈನಲ್ಲಿ ಅವರ ಒಳ್ಳೆಯ ಸ್ನೇಹಿತನನ್ನು ಭೇಟಿಯಾಗಿದ್ದಾರೆ.
ಆಗಾಗ್ಗೆ ತಮ್ಮ ಪ್ರಯಾಣದ ವಿಡಿಯೋಗಳನ್ನು ಹಂಚಿಕೊಳ್ಳುವ ಮೈಕೆಲ್ ವಾಘನ್, ಕಳೆದ ವರ್ಷ ದೀಪಾವಳಿಯ ಸಮಯದಲ್ಲಿ ಭೇಟಿ ಮಾಡಿದ್ದ ಮುಂಬೈನಲ್ಲಿರುವ ದಿನಜಯಾಲ್ ರನ್ನು ಮತ್ತೆ ಭೇಟಿಯಾಗಿರುವ ವಿಷಯ ಹಂಚಿಕೊಂಡಿದ್ದಾರೆ. ಅವರು ವೃತ್ತಿಯಲ್ಲಿ ಕ್ಷೌರಿಕರಾಗಿರುವ ದಿನಜಯಾಲ್ ರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.
“ನನ್ನ ಉತ್ತಮ ಸ್ನೇಹಿತ ದಿನಜಯಾಲ್ ಅವರ ಬಳಿ ಟ್ರಿಮ್ ಮಾಡಿಸಿಕೊಳ್ಳಲು ಹಿಂತಿರುಗಿರುವುದು ಅದ್ಭುತವಾಗಿದೆ……. ನೀವು ಮುಂಬೈನಲ್ಲಿದ್ದರೆ ಅವರನ್ನು ಭೇಟಿ ಮಾಡಿ …… ಓರ್ಮಿನ್ಸ್ಟನ್ ರಸ್ತೆ” ಎಂದು ಕ್ರಿಕೆಟಿಗ ವಾಘನ್ ಟ್ವಿಟರ್ ನಲ್ಲಿ ಬರೆದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಇಂಟರ್ನೆಟ್ ಬಳಕೆದಾರರು, ರಸ್ತೆಬದಿಯ ಟ್ರಿಮ್ಮಿಂಗ್ ಬಗ್ಗೆ ಕ್ರಿಕೆಟಿಗನ ಒಲವು ಮಾನವೀಯ ಕಥೆಯಾಗಿದೆ . ಮೈಕೆಲ್ ವಾಘನ್ ಮತ್ತು ರಸ್ತೆಬದಿಯ ಟ್ರಿಮ್ಮಿಂಗ್ ಎಂದಿಗೂ ಮುಗಿಯದ ಮಾನವೀಯ ಕಥೆ ಎಂದಿದ್ದಾರೆ.
ಮತ್ತೊಬ್ಬ ಬಳಕೆದಾರರು “ಬ್ರೋ ದಯವಿಟ್ಟು ಅವನಿಗೂ ಒಳ್ಳೆಯ ಸಂಭಾವನೆ ಕೊಡಿ” ಎಂದು ಕ್ಷೌರಿಕನಿಗೆ ಹೆಚ್ಚು ಹಣ ನೀಡುವಂತೆ ಕೇಳಿಕೊಂಡಿದ್ದಾರೆ. “ನೀವು ನಿಜವಾಗಿಯೂ ಡೌನ್ ಟು ಅರ್ಥ್ ವ್ಯಕ್ತಿ” ಎಂದು ಮತ್ತೊಬ್ಬ ಅಭಿಮಾನಿ ಬರೆದಿದ್ದಾರೆ.
ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಮೈಕೆಲ್ ವಾಘನ್ ಮುಂಬೈಗೆ ಭೇಟಿ ನೀಡಿದ್ದರು. 2023 ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದ ಕಾರಣದಿಂದಾಗಿ ಮಾಜಿ ಕ್ರಿಕೆಟಿಗ ವಾಘನ್ ಮುಂಬೈಗೆ ಬಂದಾಗ, ನಗರದ ಬಗ್ಗೆ ಮತ್ತು ಮಕ್ಕಳು ಗಲ್ಲಿಯಲ್ಲಿ ಕ್ರಿಕೆಟ್ ಆಡುವ ಕುರಿತು ಹಲವಾರು ವೀಡಿಯೊಗಳನ್ನು ಹಂಚಿಕೊಂಡಿದ್ದರು. ಅದೇ ರೀತಿ ರಸ್ತೆ ಬದಿಯ ಕ್ಷೌರದ ಅಂಗಡಿ ಮಾಲೀಕ ದಿನಜಯಾಲ್ ಬಳಿ ಟ್ರಿಮ್ ಮಾಡಿಸಿಕೊಂಡು ಸ್ನೇಹ ಬೆಳೆಸಿದರು. ಈ ವೀಡಿಯೊವನ್ನು ಸಹ ಪೋಸ್ಟ್ ಮಾಡಿದ್ದರು.
ಮೈಕೆಲ್ ವಾಘನ್ ಇಂಗ್ಲೆಂಡ್‌ನ ಅತ್ಯಂತ ಪ್ರಭಾವಶಾಲಿ ಕ್ರಿಕೆಟಿಗರಲ್ಲಿ ಒಬ್ಬರು. ಒಂದು ಪೀಳಿಗೆಯಲ್ಲಿ ಆಶಸ್ ಕಪ್ ಗೆದ್ದ ಮೊದಲ ನಾಯಕ ಎಂದು ಕ್ರೀಡಾ ಇತಿಹಾಸದಲ್ಲಿ ಶಾಶ್ವತವಾಗಿ ಗುರುತಿಸಲ್ಪಟ್ಟಿದ್ದಾರೆ. 1999 ರಿಂದ 2008 ರವರೆಗಿನ ಅವರ ವೃತ್ತಿಜೀವನದಲ್ಲಿ ವಾಘನ್ ಇಂಗ್ಲೆಂಡ್ ಪರ 22 ವಿಕೆಟ್‌ಗಳನ್ನು ಪಡೆದಿದ್ದು 7728 ರನ್ ಗಳಿಸಿದ್ದಾರೆ.