ಮಹರಾಷ್ಟ್ರದ ನಾಗ್ಪುರದಲ್ಲಿ ಬುಧವಾರದಂದು ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಉತ್ಕರ್ಷ್ ಧಾಖೋಲೆ ಎಂಬ 25 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ತನ್ನ ಶಿಕ್ಷಣ ಮತ್ತು ವೃತ್ತಿಜೀವನದ ಬಗ್ಗೆ ಜಗಳವಾಡಿ ತನ್ನ ಹೆತ್ತವರನ್ನು ಕೊಂದಿದ್ದಾನೆ.
ಡಿಸೆಂಬರ್ 26 ರಂದು ಈ ಘಟನೆ ನಡೆದಿತ್ತು. ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ವರದಿ ಮಾಡಿದ ನಂತರ ಬುಧವಾರ ಕೊಲೆ ವಿಚಾರ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧನದ ನಂತರ ಉತ್ಕರ್ಷ್ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಪವರ್ ಪ್ಲಾಂಟ್‌ನಲ್ಲಿ ತಂತ್ರಜ್ಞ ಮತ್ತು ಸಾಮಾಜಿಕ ಕಾರ್ಯಕರ್ತನಾಗಿದ್ದ 55 ವರ್ಷದ ಲೀಲಾಧರ್ ಧಾಖೋಲೆ ಮತ್ತು ಶಿಕ್ಷಕಿಯಾಗಿದ್ದ ಅವರ 50 ವರ್ಷದ ಪತ್ನಿ ಅರುಣಾ ಮೃತಪಟ್ಟವರು.
ಡಿಸಿಪಿ(ವಲಯ V) ನಿಕೇತನ್ ಕದಮ್ ಮಾಹಿತಿ ನೀಡಿ, ಡಿಸೆಂಬರ್ 26 ರಂದು ಮಧ್ಯಾಹ್ನದ ಸುಮಾರಿಗೆ ಉತ್ಕರ್ಷ್ ತನ್ನ ತಾಯಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಮನೆಗೆ ಹಿಂದಿರುಗಿದ ತನ್ನ ತಂದೆಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಸಂಜೆ 5 ಗಂಟೆಯ ನಂತರ ಶವಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಜನವರಿ 1 ರಂದು ಬೆಳಿಗ್ಗೆ ಕಪಿಲ್ ನಗರ ಪ್ರದೇಶದ ಮನೆಯೊಂದರಲ್ಲಿ ಎರಡು ಮೃತ ದೇಹಗಳಿವೆ ಎಂದು ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ಈ ಪ್ರಕರಣದಲ್ಲಿ ಉತ್ಕರ್ಷ್ ದಾಖೋಲೆಯನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಉತ್ಕರ್ಷ್‌ನ ಕಳಪೆ ಶೈಕ್ಷಣಿಕ ಸಾಧನೆಯ ಬಗ್ಗೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಕೃತ್ಯವೆಸಗಿದ ಉತ್ಕರ್ಷ್ ಕಾಲೇಜಿಗೆ ಹೋಗುತ್ತಿದ್ದ ತನ್ನ ಸಹೋದರಿಯನ್ನು ಅವರ ಚಿಕ್ಕಪ್ಪನ ಮನೆಗೆ ಕರೆದೊಯ್ದಿದ್ದ. ಪೋಷಕರು ಧ್ಯಾನ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಹೋಗಿದ್ದಾರೆ ಎಂದು ಹೇಳಿದ್ದ. ಕೊಲೆ ಬಗ್ಗೆ ಗೊತ್ತೇ ಇಲ್ಲದಂತೆ ಸಹೋದರಿಯೊಂದಿಗೆ ಚಿಕ್ಕಪ್ಪನ ಮನೆಯಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.