ಬೆಂಗಳೂರು: ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ನಡೆದ ನೀಟ್ ಪರೀಕ್ಷೆ ಫಲಿತಾಂಶದ ನಂತರ ಇಂಜಿನಿಯರಿಂಗ್ ಸೀಟು ಹಂಚಿಕೆ ಮಾಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್ ಫಲಿತಾಂಶಕ್ಕೂ ಮೊದಲೇ ಇಂಜಿನಿಯರಿಂಗ್ ಸೀಟ್ ಹಂಚಿಕೆ ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ವೈದ್ಯಕೀಯ ಕೋರ್ಸ್ ಹಂಚಿಕೆ ಮಾಡಿದ ನಂತರ ಇಂಜಿನಿಯರಿಂಗ್ ಸೀಟು ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 1.24 ಲಕ್ಷ ಇಂಜಿನಿಯರಿಂಗ್ ಸೀಟುಗಳು ಲಭ್ಯವಿದೆ. ರ್ಯಾಂಕ್ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ. ಸಿಇಟಿಯಲ್ಲಿ ಒಳ್ಳೆಯ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸೀಟು ಸಿಗುತ್ತದೆ. ಸೀಟು ಸಿಗಲ್ಲ ಎನ್ನುವ ಆತಂಕದಲ್ಲಿ ಡೊನೇಷನ್ ಕೊಟ್ಟು ಪ್ರವೇಶ ಪಡೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.
ಎಲ್ಲಾ ಪ್ರಕ್ರಿಯೆಗಳು ಆನ್ಲೈನ್ ಮೂಲಕ ನಡೆಯಲಿದ್ದು, ಆನ್ಲೈನ್ ನಲ್ಲಿ ದಾಖಲೆ ಪರಿಶೀಲಿಸಲಾಗುತ್ತದೆ. ವಿದ್ಯಾರ್ಥಿಗಳು ಪ್ರಾಧಿಕಾರದ ಮುಂದೆ ಬಂದು ಸರದಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ. ಕಾಲೇಜುಗಳಲ್ಲಿನ ಕೋರ್ಸ್ ಶುಲ್ಕವನ್ನು ಇನ್ನೂ ನಿಗದಿಪಡಿಸಿಲ್ಲ ಎಂದು ತಿಳಿಸಿದ್ದಾರೆ.