ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷ ಇಂಜಿನಿಯರಿಂಗ್ ಶುಲ್ಕ ಹೆಚ್ಚಳ ಮಾಡುವುದಿಲ್ಲ. ಹಿಂದಿನ ಶುಲ್ಕವನ್ನು ಮುಂದುವರಿಸಲು ರಾಜ್ಯ ಸರ್ಕಾರ ತಿರ್ಮಾನಿಸಿದೆ. ಖಾಸಗಿ ಕಾಲೇಜುಗಳು ಶುಲ್ಕ ಏರಿಕೆಗೆ ಮನವಿ ಸಲ್ಲಿಸಿದ್ದು, ಈ ವರ್ಷ ಶುಲ್ಕ ಏರಿಕೆ ಮಾಡದಿರಲು ತೀರ್ಮಾನಿಸಲಾಗಿದೆ.
ಕರ್ನಾಟಕ ಅನುದಾನಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘ ಹಾಗೂ ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ವೃತ್ತಿಪರ ಕಾಲೇಜುಗಳ ಸಂಘದ ಪ್ರತಿನಿಧಿಗಳೊಂದಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಭೆ ನಡೆಸಿ ಮಾಹಿತಿ ನೀಡಿದರು.
ಕೋವಿಡ್ ಕಾರಣ ಹಿಂದಿನ ವರ್ಷದ ಶುಲ್ಕವನ್ನೇ ಪಡೆಯಲು ತೀರ್ಮಾನಿಸಲಾಗಿದೆ. ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ 58,806 ರೂ, 65340 ರೂ. ಎರಡು ಸ್ಲ್ಯಾಬ್ ಗಳನ್ನು ನಿಗದಿ ಮಾಡಲಾಗಿದೆ. ಖಾಸಗಿ ಕಾಲೇಜುಗಳಲ್ಲಿ ಇತರೆ ಶುಲ್ಕದ ನೆಪದಲ್ಲಿ ಹೆಚ್ಚುವರಿ ಶುಲ್ಕ ಪಡೆಯಲು ಕಡಿವಾಣ ಹಾಕಿದ್ದು, ಗರಿಷ್ಠ ಮಿತಿ 20,000 ರೂ. ನಿಗದಿಗೊಳಿಸಲಾಗಿದೆ. ಇನ್ನು ಮುಂದೆ ಕಾಲೇಜುಗಳಲ್ಲಿ ಪ್ರವೇಶ., ಇತರೆ ಶುಲ್ಕ ಕಟ್ಟುವಂತಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಶುಲ್ಕ ಪಾವತಿಸಬೇಕಿದೆ.
ಇನ್ನು ರಾಜ್ಯದ 4 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕನ್ನಡದಲ್ಲಿಯೇ ಇಂಜಿನಿಯರಿಂಗ್ ಪಾಠ ಮಾಡಲಾಗುತ್ತದೆ. ಈ ವರ್ಷ ಮೈಸೂರು, ಚಿಕ್ಕಬಳ್ಳಾಪುರ, ವಿಜಯಪುರ ಮತ್ತು ಬೀದರ್ ಜಿಲ್ಲೆಯ ಕಾಲೇಜಿನಲ್ಲಿ ಕನ್ನಡದಲ್ಲಿ ಇಂಜಿನಿಯರಿಂಗ್ ಪಾಠ ಆರಂಭವಾಗಲಿದೆ ಎಂದು ಹೇಳಿದ್ದಾರೆ.