ತಾಜ್‌ಮಹಲ್ ವೀಕ್ಷಣೆಗೆ ನಕಲಿ ಆನ್‌ಲೈನ್ ಟಿಕೆಟ್‌ಗಳನ್ನು ಮಾರಾಟ ಮಾಡಿ, ನೂರಾರು ಜನರನ್ನು ವಂಚಿಸಿದ ಸಾಫ್ಟ್‌ವೇರ್ ಇಂಜಿನಿಯರ್ ಓರ್ವನನ್ನು ದೆಹಲಿಯ ಸೈಬರ್ ಕ್ರೈಂ ಬ್ರಾಂಚ್ ಬಂಧಿಸಿದೆ.
ಆರೋಪಿಯನ್ನು ಸಂದೀಪ್ ಚಂದ್ ಎಂದು ಗುರುತಿಸಲಾಗಿದೆ. ಉತ್ತರಾಖಂಡದ ಡೆಹ್ರಾಡೂನ್ ನಿವಾಸಿಯಾಗಿರುವ ಈತ ಉತ್ತರ ಪ್ರದೇಶದ, ನೋಯ್ಡಾದಲ್ಲಿರುವ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ.
ಆನ್‌ಲೈನ್‌ನಲ್ಲಿ ಐತಿಹಾಸಿಕ ಸ್ಮಾರಕಗಳಿಗೆ ಟಿಕೆಟ್ ಕಾಯ್ದಿರಿಸುವಾಗ ಜನರು ಮೋಸ ಹೋಗುತ್ತಿರುವ ಬಗ್ಗೆ ಸಂಸ್ಕೃತಿ ಸಚಿವಾಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಹಾನಿರ್ದೇಶಕರು ಪೊಲೀಸರಿಗೆ ದೂರು ನೀಡಿದ್ದರು. ಅದಲ್ಲದೆ ಪ್ರವಾಸಿಗರೊಬ್ಬರು ಈ ಬಗ್ಗೆ ದೂರು ನೀಡಿದ ನಂತರ ಸಾಫ್ಟ್‌ವೇರ್ ಇಂಜಿನಿಯರ್ ನ ಮೋಸದ ಜಾಲ ಮುನ್ನೆಲೆಗೆ ಬಂದಿದೆ.
www.agramonuments.in ಎಂಬ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಿದ ಮೇಲೆ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಯ್ತು ಆದರೆ ಟಿಕೆಟ್ ಸಿಗಲಿಲ್ಲ ಎಂದು ಪ್ರವಾಸಿಗರೊಬ್ಬರು ಈ ವೆಬ್‌ಸೈಟ್ ವಿರುದ್ಧ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಲು ಶುರು ಮಾಡಿದ್ರು. ತನಿಖೆಯ ಭಾಗವಾಗಿ ಈ ವೆಬ್‌ಸೈಟ್‌ನ ನೋಂದಣಿದಾರ ಮತ್ತು ಬಳಕೆದಾರರ ತಾಂತ್ರಿಕ ವಿವರಗಳನ್ನು ಸಂಗ್ರಹಿಸಿ, ಅದರ ಆಧಾರದ ಮೇಲೆ ತಾಂತ್ರಿಕ ಕಣ್ಗಾವಲನ್ನ ಅಳವಡಿಸಲಾಯಿತು. ಈ ವೇಳೆ ಆರೋಪಿ ಆಗಾಗ್ಗೆ ಸ್ಥಳ ಬದಲಾಯಿಸುತ್ತಿದ್ದ. ಆದರೂ ಈತನ ಲೋಕೇಷನ್ ಪತ್ತೆಹಚ್ಚುವಲ್ಲಿ ಸಫಲರಾದ ಪೊಲೀಸರು, ಉತ್ತರಾಖಂಡದ ಚಂಪಾವತ್‌ನಿಂದ ಸಂದೀಪ್ ಚಂದ್ನನ್ನು ಬಂಧಿಸಿದ್ದಾರೆ.
ಲಾಕ್‌ಡೌನ್‌ನಿಂದಾಗಿ ತನ್ನ ಕೆಲಸ ಸರಿಯಾಗಿ ನಡೆಯುತ್ತಿರಲಿಲ್ಲ. ಹೀಗಾಗಿ ಇಂಟರ್‌ನೆಟ್‌ನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸುವ ಯೋಚನೆ ಬಂತು ಎಂದು ವಿಚಾರಣೆ ವೇಳೆ ಆರೋಪಿ ಬಹಿರಂಗಪಡಿಸಿದ್ದಾನೆ.
ತಾಜ್ ಮಹಲ್‌ಗೆ ಭೇಟಿ ನೀಡಲು ಆನ್‌ಲೈನ್ ಟಿಕೆಟ್‌ಗಳ ಮಾರಾಟ, ಬುಕಿಂಗ್ ನೆಪದಲ್ಲಿ ಜನರನ್ನು ವಂಚಿಸಲು ಮತ್ತು ಸುಲಭವಾಗಿ ಹಣ ಸಂಪಾದಿಸಲು ಆರೋಪಿ, www.agramonuments.in ಎಂಬ ನಕಲಿ ಡೊಮೇನ್ ಅನ್ನು ರಚಿಸಿದ್ದ. ಈತ ನಕಲಿ ವೆಬ್‌ಸೈಟ್ ಸೃಷ್ಟಿಸಲು ಬಳಸಿದ್ದ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ಪೊಲೀಸ್ ತಂಡ ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.