ಮುಂಬೈ: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಜೆಪಿಗೆ ಎಟಿಎಂನಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ಕೇಂದ್ರೀಯ ಸಂಸ್ಥೆಯ ನಾಲ್ವರು ಅಧಿಕಾರಿಗಳ ವಿರುದ್ಧ ಸುಲಿಗೆ ಆರೋಪದ ಕುರಿತು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದು, ಕೆಲವರು ಜೈಲು ಪಾಲಾಗಲಿದ್ದಾರೆ ಎಂದು ಮಂಗಳವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾವತ್, ಯಾವುದೇ ಕಂಪನಿಯ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆದಾಗಲೂ ಅದು ಜಿತೇಂದ್ರ ನವ್ಲಾನಿಗೆ ಸೇರಿದ ಸಂಸ್ಥೆಗಳಿಗೆ ಹಣವನ್ನು ವರ್ಗಾಯಿಸಿದೆ. ಇಡಿ ಮತ್ತು ಅದರ ಕೆಲವು ಅಧಿಕಾರಿಗಳು ಬಿಜೆಪಿಗೆ ಎಟಿಎಂ(ಸ್ವಯಂಚಾಲಿತ ಟೆಲ್ಲರ್ ಮೆಷಿನ್) ಆಗಿ ಮಾರ್ಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಅವರು ಪ್ರಧಾನ ಮಂತ್ರಿ ಕಚೇರಿಯೊಂದಿಗೆ(ಪಿಎಂಒ) ಅದರ ವಿವರಗಳನ್ನು ಹಂಚಿಕೊಂಡಿದ್ದಾರೆ. ಮುಂಬೈ ಪೊಲೀಸರು ನಾಲ್ವರು ಇಡಿ ಅಧಿಕಾರಿಗಳ ವಿರುದ್ಧ ಸುಲಿಗೆ ಮತ್ತು ಭ್ರಷ್ಟಾಚಾರ ಆರೋಪಗಳ ತನಿಖೆ ನಡೆಸುತ್ತಿದ್ದರು. ಮುಂಬೈ ಪೊಲೀಸರು ಅದಕ್ಕೆ ಸಮರ್ಥರು. ಕೆಲವು ಇಡಿ ಅಧಿಕಾರಿಗಳು ಜೈಲಿಗೆ ಹೋಗುತ್ತಾರೆ ಎಂದು ಹೇಳಿದ ಅವರು, ಇಡಿ ಅಧಿಕಾರಿಗಳ ಹೆಸರು ಅಥವಾ ಹುದ್ದೆಗಳನ್ನು ಬಹಿರಂಗಪಡಿಸಲಿಲ್ಲ.
ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಅವರ ನಿಕಟವರ್ತಿ ಎಂದು ಪರಿಗಣಿಸಲಾದ ನಾಯಕ ಸೇರಿದಂತೆ ಕೆಲವು ಶಿವಸೇನೆ ಪದಾಧಿಕಾರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ದಿನದಂದೇ ಅವರ ಹೇಳಿಕೆಗಳು ಹೊರಬಂದವು.