ಬೆಂಗಳೂರು: 15 -20 ವರ್ಷದಿಂದ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಒಳಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ಸೇವಾ ಭದ್ರತೆ ಒದಗಿಸಲು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಟಿಸಿಎಲ್ ಮತ್ತು ಎಸ್ಕಾಂಗಳ ತಾಂತ್ರಿಕ ವಿಭಾಗದಲ್ಲಿ 15 -20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವವರ ಹೊರಗುತ್ತಿಗೆ ನೌಕರರನ್ನು ಒಳಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ಸೇವಾ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕಾನೂನಿನ ಅವಕಾಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿ ಸ್ಟೇಷನ್ ಆಪರೇಟರ್ ಗಳು, ಸ್ಟೇಷನ್ ಸಹಾಯಕರು, ಗ್ಯಾಂಗ್ ಮೆನ್, ಮೀಟರ್ ರೀಡರ್ ಹುದ್ದೆಗಳಲ್ಲಿ ಸಾಕಷ್ಟು ಮಂದಿ 15 -20 ಕ್ಕೂ ಹೆಚ್ಚು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸೇವಾ ಭದ್ರತೆ ಒದಗಿಸಿ ಒಳಗುತ್ತಿಗೆ ವ್ಯಾಪ್ತಿಗೆ ತರಲು ಸರ್ಕಾರ ಯೋಜಿಸಿದ್ದು, ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸಲು ಇಲಾಖೆಯ ಅಪಾರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ನೇತೃತ್ವದ ಸಮಿತಿ ರಚಿಸಲಾಗಿದೆ ಎಂದು ಹೇಳಿದ್ದಾರೆ.