
ಒಂದು ಕಾಲದಲ್ಲಿ ವಾಣಿಜ್ಯ ನಗರಿ ಮುಂಬೈಯಲ್ಲಿ ಮಹಾರಾಜನಂತೆ ಮೆರೆದಿದ್ದ ‘ಪ್ರೀಮಿಯರ್ ಪದ್ಮಿನಿ’ ಟ್ಯಾಕ್ಸಿಗಳ ಯುಗ ಈಗ ಅಧಿಕೃತವಾಗಿ ಅಂತ್ಯವಾಗುತ್ತಿದೆ. ಆರು ದಶಕಗಳ ಕಾಲ ಮುಂಬೈ ರಸ್ತೆಗಳಲ್ಲಿ ರಾಜನಂತೆ ಮೆರೆದಿದ್ದ ಈ ಟ್ಯಾಕ್ಸಿಗಳು ಈಗ ಅಂತಿಮವಾಗಿ ವಿದಾಯ ಹೇಳುತ್ತಿವೆ.
ಮಹಾರಾಷ್ಟ್ರ ಸರ್ಕಾರ 2008ರಲ್ಲಿ ಕ್ಯಾಬ್ ಗಳ ಆಯಸ್ಸನ್ನು 25 ವರ್ಷಗಳ ನಿಗದಿಪಡಿಸಿದ್ದು ಬಳಿಕ 2013ರಲ್ಲಿ ಇದನ್ನು 20 ವರ್ಷಗಳಿಗೆ ನಿಗದಿಪಡಿಸಿತ್ತು. ಹೀಗಾಗಿ 2003 ಅಕ್ಟೋಬರ್ 29ರಂದು ಮುಂಬೈನ Tardeo ಆರ್ ಟಿ ಓ ಕಚೇರಿಯಲ್ಲಿ ಕೊನೆಯದಾಗಿ ನೋಂದಣಿಗೊಂಡಿದ್ದ MH 01-JA 2556 ಬ್ಲಾಕ್ ಅಂಡ್ ಎಲ್ಲೋ ಟ್ಯಾಕ್ಸಿ ತನ್ನ ಆಯಸ್ಸು ಪೂರ್ಣಗೊಂಡ ಕಾರ್ಯ ಕಾರಣಕ್ಕೆ ವಿದಾಯ ಹೇಳುತ್ತಿದೆ. ಈ ಮೂಲಕ ‘ಪ್ರೀಮಿಯರ್ ಪದ್ಮಿನಿ’ ಯುಗ ಅಂತ್ಯಗೊಂಡಂತಾಗುತ್ತದೆ.
ಒಂದು ಕಾಲದಲ್ಲಿ ಲೋಕಲ್ ರೈಲುಗಳ ಬಳಿಕ ಮುಂಬೈ ಜನತೆಯ ನಾಡಿಮಿಡಿತವೇ ಆಗಿದ್ದ ಬ್ಲಾಕ್ ಅಂಡ್ ಯಲ್ಲೋ ಬಣ್ಣದ ‘ಪ್ರೀಮಿಯರ್ ಪದ್ಮಿನಿ’ ಟ್ಯಾಕ್ಸಿಗಳು ಈಗ ಸಂಪೂರ್ಣವಾಗಿ ನಿಂತಂತಾಗುತ್ತದೆ. ಇತ್ತೀಚೆಗಷ್ಟೇ ಮುಂಬೈ ನಗರದ ಮತ್ತೊಂದು ಆಕರ್ಷಣೀಯ ಸಂಚಾರ ವ್ಯವಸ್ಥೆಯಾಗಿದ್ದ ಡಬಲ್ ಡೆಕ್ಕರ್ ಬಸ್ ಸ್ಥಗಿತಗೊಂಡಿದ್ದ ಬಳಿಕ ಇದೀಗ ‘ಪ್ರೀಮಿಯರ್ ಪದ್ಮಿನಿ’ ಟ್ಯಾಕ್ಸಿಗಳ ಯುಗಾಂತ್ಯವಾಗಿದೆ. ಇನ್ನು ಮುಂದೆ ಹಳೆಯ ಹಿಂದಿ ಚಲನಚಿತ್ರಗಳಲ್ಲಿ ಮಾತ್ರ ಪ್ರೀಮಿಯರ್ ಪದ್ಮಿನಿ ಟ್ಯಾಕ್ಸಿಗಳ ಸಂಚಾರವನ್ನು ನೋಡಬಹುದಾಗಿದೆ.