
ತೆಲಂಗಾಣ -ಛತ್ತೀಸ್ ಗಢದ ಗಡಿಭಾಗದಲ್ಲಿ ನಡೆದ ಎನ್ ಕೌಂಟರ್ ನಲ್ಲಿ 6 ಮಂದಿ ಮಾವೋವಾದಿ ನಕ್ಸಲರ ಹತ್ಯೆ ಮಾಡಲಾಗಿದೆ.
ತೆಲಂಗಾಣ ಗ್ರೇ ಹೂಂಡ್ಸ್ ಪಡೆ ಮತ್ತು ನಕ್ಸಲರ ನಡುವೆ ಛತ್ತೀಸ್ ಗಢದ ಗಡಿಭಾಗದಲ್ಲಿ ಗುಂಡಿನ ಕಾಳಗ ನಡೆದಿದೆ. ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಿ ಆರು ಮಂದಿ ಮಾವೋವಾದಿಗಳನ್ನು ಹತ್ಯೆಮಾಡಿದ್ದಾರೆ. ಛತ್ತೀಸ್ ಗಢದ ಸುಕ್ಮಾ ಹಾಗೂ ತೆಲಂಗಾಣದ ಕೊಟ್ಟಗುಡೆಂ ಜಿಲ್ಲೆಗಳ ಗಡಿ ಭಾಗದಲ್ಲಿ ಗ್ರೇ ಹೂಂಡ್ಸ್ ಪಡೆ, ಛತ್ತೀಸ್ ಗಢ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಚೆರ್ಲಾ ಪ್ರದೇಶದಿಂದ 25 ಕಿಲೋಮೀಟರ್ ದೂರದ ಅರಣ್ಯಪ್ರದೇಶ ಕುರ್ನವಲ್ಲಿ ಪೆಸರ್ಲಪಡು ಬಳಿ ಎನ್ಕೌಂಟರ್ ನಡೆಸಿದ್ದು, 6 ಮಂದಿ ಮಾವೋವಾದಿಗಳು ಹತ್ಯೆಯಾಗಿದ್ದಾರೆ. ನಕ್ಸಲ್ ಕಮಾಂಡರ್ ಮಧು, ನಾಲ್ವರು ಮಹಿಳೆಯರು ಸೇರಿ 6 ಮಂದಿ ಮೃತಪಟ್ಟಿದ್ದಾರೆ. ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆಸಲಾಗಿದೆ.
ತೆಲಂಗಾಣ ಮತ್ತು ಛತ್ತೀಸ್‌ಗಢದ ಗಡಿ ಪ್ರದೇಶದ ಕಿಸ್ತಾರಾಮ್ ಪಿಎಸ್ ಮಿತಿಯ ಅರಣ್ಯ ಪ್ರದೇಶದಲ್ಲಿ ಎನ್‌ಕೌಂಟರ್‌ನಲ್ಲಿ 6 ನಕ್ಸಲರು ಹತರಾಗಿದ್ದಾರೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ, ನಾವು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ ಎಂದು ತೆಲಂಗಾಣದ ಭದ್ರಾದ್ರಿ ಕೊತಗುಡೆಂ ಜಿಲ್ಲೆ ಪೊಲೀಸ್ ಅಧೀಕ್ಷಕ ಸುನಿಲ್ ದತ್ ಹೇಳಿದ್ದಾರೆ.