ಹುಬ್ಬಳ್ಳಿ: ಬಿಜೆಪಿ ಅಧಿಕಾರದಲ್ಲಿದ್ದಾಗ ಹತ್ಯೆಗಳು ನಡೆದಿಲ್ಲವೇ ಎಂಬ ಗೃಹ ಸಚಿವರ ಆರೋಪದ ಬಗ್ಗೆ ಬಿಜೆಪಿ ಶಾಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಸರ್ಕಾರವಿದ್ದಾಗ ಎನ್ ಕೌಂಟರ್ ಆಗಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದು ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗ ಎನ್ ಕೌಂಟರ್ ಆಗಿದ್ದರೆ ಈ ರೀತಿ ಇರಲಿಲ್ಲ. ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ ಅವರು ಮಾಡಿದ ತಪ್ಪಿನಿಂದಾಗಿ ಜನರು ಬುದ್ಧಿ ಕಲಿಸಿದ್ದಾರೆ. ಬಿಜೆಪಿಗೂ ಸರಿಯಾದ ಬುದ್ದಿ ಕಲಿಸಿದ್ದಾರೆ ಎಂದು ಸ್ವಪಕ್ಷದ ವಿರುದ್ಧ ಟೀಕಿಸಿದ್ದಾರೆ.
ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ನಡೆದಾಗ ಎನ್ ಕೌಂಟರ್ ನಿರ್ಧಾರ ಕೈಗೊಂಡಿದ್ದರೆ ರಾಜ್ಯದಲ್ಲಿ ಕಾನೂನು ಮತ್ತು ಹಾಳಾಗುತ್ತಿರಲಿಲ್ಲ ಎಂದು ಹೇಳಿದ ಅವರು, ಗ್ಯಾರಂಟಿ ಜಾರಿ ಬಳಿಕ ಸಚಿವರು, ಶಾಸಕರಿಗೆ ಉತ್ಪನ್ನ ಕಡಿಮೆಯಾಗಿದೆ, ಪೊಲೀಸ್ ಅಧಿಕಾರಿಗಳಿಂದ ಕೋಟಿ ಕೋಟಿ ಹಣ ವಸೂಲಿ ಮಾಡುತ್ತಾರೆ. ಇದರಿಂದ ಗಾಂಜಾ ಅವ್ಯಾಹತವಾಗಿ ಮಾರಾಟವಾಗುತ್ತಿದೆ. ಪೊಲೀಸರ ವರ್ಗಾವಣೆ ಮಾಡಿ ದುಡ್ಡು ತಿನ್ನುವುದೇ ಶಾಸಕರ ಕೆಲಸವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.