ನವದೆಹಲಿ: ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಉದ್ಯೋಗ ಸೃಷ್ಟಿಯು ಶೇಕಡ 36 ರಷ್ಟು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಕಾರ, 2014 ರಿಂದ 2024 ರವರೆಗೆ 17 ಕೋಟಿ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಕಳೆದ ವರ್ಷ ದೇಶದಲ್ಲಿ ಸುಮಾರು 4 ಕೋಟಿ 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. 2004 ರಿಂದ 2014 ರವರೆಗೆ ದಾಖಲಾದ ಶೇಕಡ 7 ರ ಬೆಳವಣಿಗೆಗಿಂತ 2014-2024 ರ ನಡುವೆ ಸಾಧಿಸಿದ ಶೇಕಡ 36 ರ ಉದ್ಯೋಗ ಬೆಳವಣಿಗೆ ದರವು ತುಂಬಾ ಉತ್ತಮವಾಗಿದೆ ಎಂದು ಸಚಿವಾಲಯ ಹೇಳಿದೆ.
ಯುಪಿಎ ಸರ್ಕಾರದ ಅಡಿಯಲ್ಲಿ, 2004 ರಿಂದ 2014 ರ ನಡುವೆ 2 ಕೋಟಿ 90 ಲಕ್ಷ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಲಾಯಿತು. ಮೋದಿ ಸರ್ಕಾರದ ಅಡಿಯಲ್ಲಿ ಕೃಷಿ ವಲಯದಲ್ಲಿ ಉದ್ಯೋಗಾವಕಾಶಗಳು ಶೇಕಡ 19, ಉತ್ಪಾದನಾ ವಲಯದಲ್ಲಿ ಶೇಕಡ 15 ಮತ್ತು ಸೇವಾ ವಲಯದಲ್ಲಿ ಶೇಕಡ 36 ರಷ್ಟು ಬೆಳವಣಿಗೆಯಾಗಿದೆ ಎಂದು ಹೇಳಲಾಗಿದೆ.
ಸಚಿವಾಲಯದ ಪ್ರಕಾರ, ನಿರುದ್ಯೋಗ ದರವು 2017-18 ರಲ್ಲಿ ಶೇಕಡ 6 ರಿಂದ 2023-24 ರಲ್ಲಿ ಶೇಕಡ 3.2 ಕ್ಕೆ ಇಳಿದಿದೆ. ಪದವೀಧರ ಯುವಕರ ಉದ್ಯೋಗಾವಕಾಶವು 2013 ರಲ್ಲಿ ಶೇ. 33.95ರಿಂದ 2024 ರಲ್ಲಿ ಶೇಕಡ 54.81 ಕ್ಕೆ ಬೆಳೆದಿದೆ. ಕಳೆದ 7 ವರ್ಷಗಳಲ್ಲಿ 18 ರಿಂದ 28 ವರ್ಷ ವಯಸ್ಸಿನ 4 ಕೋಟಿ 70 ಲಕ್ಷ ಯುವಕರು EPFO ಗೆ ಸೇರಿದ್ದಾರೆ.