ಕೊಚ್ಚಿ: ಮಹಿಳಾ ಉದ್ಯೋಗಿಗಳ ವೃತ್ತಿಜೀವನದ ಮೇಲೆ ಮಾತೃತ್ವ ಪರಿಣಾಮ ಬೀರದಂತೆ ಉದ್ಯೋಗದಾತರು ನೋಡಿಕೊಳ್ಳಬೇಕು ಎಂದು ಕೇರಳ ಹೈಕೋರ್ಟ್ ಸೂಚಿಸಿದೆ.
ಮೂವರು ಗುತ್ತಿಗೆ ಉದ್ಯೋಗಿಗಳಿಗೆ ಹೆರಿಗೆ ಸೌಲಭ್ಯ ನೀಡಲು ಕೇರಳ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿದ ಕೇರಳ ಹೈಕೋರ್ಟ್, ಮಹಿಳಾ ಉದ್ಯೋಗಿಗಳ ವೃತ್ತಿಪರ ವೃತ್ತಿಜೀವನಕ್ಕೆ ಹೆರಿಗೆ ಕಾರಣದಿಂದ ತೊಂದರೆ ಉಂಟಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಉದ್ಯೋಗದಾತರಿಗೆ ಇದೆ ಎಂದು ಅಭಿಪ್ರಾಯಪಟ್ಟಿದೆ.
ಮಹಿಳಾ ಉದ್ಯೋಗಿಗಳೆಂಬ ಕಾರಣಕ್ಕೆ ಅವರ ಬಗ್ಗೆ ಸಹಾನುಭೂತಿ ಹೊಂದಿರಬೇಕು. ಕೆಲಸದ ಸ್ಥಳದಲ್ಲಿ ಅವರ ಘನತೆಯನ್ನು ಕಡಿಮೆ ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳಬಾರದು. ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಮೂವರು ಸಿಬ್ಬಂದಿಗೆ ಹೆರಿಗೆ ಸೌಲಭ್ಯ ನೀಡಬೇಕು ಎಂದು ರಾಜ್ಯ ಸರ್ಕಾರ ಮತ್ತು ಕೇರಳ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (ಕೆಯುಹೆಚ್‌ಎಸ್) ನಿರ್ದೇಶಿಸುವ ಸಂದರ್ಭದಲ್ಲಿ ಕೇರಳ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ.
KUHS ನಲ್ಲಿ ಪ್ರೋಗ್ರಾಮರ್ ಗಳಾಗಿರುವ ಅರ್ಜಿದಾರರಾದ ಬಿ. ನಾಜಿಯಾ, ಎಂ.ಎಸ್. ಧನ್ಯಾ ಮತ್ತು ಜಿನ್ಸಿ ಪಿ. ಫ್ರಾನ್ಸಿಸ್ ಅವರು ಹೆರಿಗೆ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ. ಅವರಿಗೆ ಸೌಲಭ್ಯ ಕಲ್ಪಿಸಬೇಕೆಂದು ಕೋರ್ಟ್ ತಿಳಿಸಿದೆ.
ಹೆರಿಗೆಯ ಮೊದಲು ಮತ್ತು ನಂತರದ ಕೆಲವು ಅವಧಿಗಳಿಗೆ ಮಹಿಳೆಯರ ಉದ್ಯೋಗ ನಿಯಂತ್ರಿಸಲು ಮತ್ತು ಅವರಿಗೆ ಹೆರಿಗೆ ಮತ್ತು ಇತರ ಕೆಲವು ಪ್ರಯೋಜನಗಳನ್ನು ಒದಗಿಸಲು ಹೆರಿಗೆ ಪ್ರಯೋಜನ ಕಾಯ್ದೆ 1961 ಅನ್ನು ಜಾರಿಗೊಳಿಸಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಅವರ ಅರ್ಜಿಯ ಪ್ರಕಾರ, ಕೆಯುಹೆಚ್‌ಎಸ್‌ನಲ್ಲಿ ನಾಜಿಯಾ ಮತ್ತು ಜಿನ್ಸಿ 9 ವರ್ಷಗಳಿಂದ, ಧನ್ಯಾ 5 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮೆಚ್ಯೂರಿಟಿ ಪ್ರಯೋಜನಗಳನ್ನು ನಿರಾಕರಿಸುವಲ್ಲಿ ಯಾವುದೇ ಸಮರ್ಥನೆ ಇಲ್ಲ. ಸುಪ್ರೀಂ ಕೋರ್ಟ್ ಪ್ರಕಾರ, ಮಹಿಳೆಯರನ್ನು ಅವರ ಕೆಲಸದ ಸ್ಥಳಗಳಲ್ಲಿ ಗೌರವದಿಂದ ನಡೆಸಿಕೊಳ್ಳಬೇಕು ಎಂದು ಹೇಳಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ಮಾತೃತ್ವದಿಂದ ಮಹಿಳೆಯರ ವೃತ್ತಿಜೀವನಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಉದ್ಯೋಗದಾತರು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನ್ಯಾ. ರಾಜಾ ವಿಜಯರಾಘವನ್ ವಿ. ಅವರು ಹೇಳಿದ್ದಾರೆ.
ದುಡಿಯುವ ಮಹಿಳೆಗೆ ಗೌರವಾನ್ವಿತ ರೀತಿಯಲ್ಲಿ ಪ್ರಸವಪೂರ್ವ ಅಥವಾ ನಂತರದ ಅವಧಿಯಲ್ಲಿ ಎಲ್ಲಾ ಸೌಲಭ್ಯ ಒದಗಿಸಲು ಕಾಯ್ದೆಯಲ್ಲಿ ಹೇಳಿದ್ದು, ಅವರಿಗೆ ಸೌಲಭ್ಯ ನೀಡುವುದರಿಂದ ಅವರು ಮಾತೃತ್ವದ ಅವಧಿಯ ಬಲವಂತದ ಗೈರುಹಾಜರಿ ಭಯದಿಂದ ಹೊರಬರಲು ಸಾಧ್ಯವಾಗುತ್ತದೆ. ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ಮಹಿಳಾ ಉದ್ಯೋಗಿಗಳ ಸೌಲಭ್ಯ ಕಲ್ಪಿಸುವ ಬಗ್ಗೆ ಕಾರಣವನ್ನು ತೀರ್ಪು ಎತ್ತಿ ತೋರಿಸಿದ್ದು, ಉದ್ಯೋಗದಾತರು ಅವರಿಗೆ ಅರ್ಹವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಕಾಳಜಿ ವಹಿಸಬೇಕು ಎಂದು ಹೇಳಿದೆ.
ಕೇರಳ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಪ್ರೋಗ್ರಾಮರ್‌ಗಳಾಗಿ ಕೆಲಸ ಮಾಡುತ್ತಿದ್ದ ಈ ಮೂವರಿಗೆ ಹೆರಿಗೆ ಸೌಲಭ್ಯಗಳನ್ನು ನಿರಾಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿದೆ. ಒಪ್ಪಂದದ ಅವಧಿ 179 ದಿನಗಳಾಗಿದ್ದು, ಇದು ಒಂದು ವರ್ಷದ ನಿಗದಿತ ಅವಧಿಗಿಂತ ಕಡಿಮೆಯಿರುವುದರಿಂದ ಪ್ರಯೋಜನಗಳೊಂದಿಗೆ ಹೆರಿಗೆ ರಜೆ ವಿನಂತಿ ತಿರಸ್ಕರಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದರು.
ಜನವರಿ 2021 ರಲ್ಲಿ, ರಾಖಿ ಪಿ.ವಿ. ಮತ್ತು ಇತರರು ಪ್ರಕರಣದಲ್ಲಿ ಹೈಕೋರ್ಟ್ ತೀರ್ಪಿನ ಅನುಸಾರ ಸಂಪೂರ್ಣ ವೇತನದ ಮೇಲೆ ಹೆರಿಗೆ ರಜೆಯ ಪ್ರಯೋಜನವನ್ನು ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಮಹಿಳಾ ಅಧಿಕಾರಿಗಳಿಗೆ ವಿಸ್ತರಿಸಲು ತಿಳಿಸಲಾಗಿದೆ ಎನ್ನಲಾಗಿದ್ದು, ಅಂತೆಯೇ ಅರ್ಜಿದಾರರಿಗೆ ನೀಡಬೇಕಾದ ಹೆರಿಗೆ ಸೌಲಭ್ಯಗಳನ್ನು ತ್ವರಿತವಾಗಿ ವಿತರಿಸಲು ವಿಶ್ವವಿದ್ಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.