
ಬೆಂಗಳೂರು: ಪಹಣಿಗಳಿಗೆ ಆಧಾರ್ ಜೋಡಣೆ ಯೋಜನೆಯಡಿ ಕಾರ್ಯ ನಿರ್ವಹಿಸಿದ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರಿಗೆ ಸಂಭಾವನೆ ನೀಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಪಹಣಿ ಜೊತೆಗೆ ಆಧಾರ್ ಜೋಡಣೆ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಅಕ್ರಮ ನೋಂದಣಿಗಳ ತಡೆ, ರೈತರಿಗೆ ಸೂಕ್ತ ಸಮಯದಲ್ಲಿ ಅಗತ್ಯ ನೆರವು ನೀಡಲು, ಸರ್ಕಾರಿ ಯೋಜನೆಗಳನ್ನು ರೈತರಿಗೆ ತಲುಪಿಸುವಲ್ಲಿ, ಪೌತಿ ಖಾತೆ ನೀಡಲು ಆಧಾರ್ ಜೋಡಣೆ ಪಾತ್ರ ಮಹತ್ವದಾಗಿದೆ ಎಂದು ಹೇಳಿದ್ದಾರೆ.
ಕಂದಾಯ ಇಲಾಖೆ ಎಲ್ಲಾ ಅಧಿಕಾರಿಗಳಿಗೂ ಆಧಾರ್ ಜೋಡಣೆಗೆ ಗುರಿ ನೀಡಲಾಗಿತ್ತು. ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರು ಈ ಕೆಲಸವನ್ನು ಸಾಧ್ಯವಾಗಿಸಿದ್ದಾರೆ. ಅವರ ಕೆಲಸ ಅವರ ಶ್ರಮ ಮತ್ತು ಪ್ರಾಮಾಣಿಕ ಕೆಲಸದ ಪರಿಣಾಮ ಪ್ರಸಕ್ತ ಸಾಲಿನ ಜನವರಿ 31ರವರೆಗೆ 2,22,83,817 ಪಹಣಿಗಳಿಗೆ ಆಧಾರ್ ಜೋಡಣೆಯಾಗಿದೆ, ಅನೇಕ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರು ತಮ್ಮ ಜೇಬಿನಿಂದ ಹಣ ಖರ್ಚು ಮಾಡಿದ್ದಾರೆ. ಹೀಗಾಗಿ ಇಂತಹ ಅಧಿಕಾರಿಗಳ ಬಗ್ಗೆ ಕಾಳಜಿ ವಹಿಸಬೇಕಿರುವುದು, ಅವರ ಕೆಲಸವನ್ನು ಪ್ರಶಂಸಿಸಬೇಕಿರುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಈ ಹಿನ್ನೆಲೆಯಲ್ಲಿ ಡಿಜಿಟಲ್ ಇಂಡಿಯಾ ಭೂ ದಾಖಲೆಗಳ ಆಧುನಿಕರಣ ಕಾರ್ಯಕ್ರಮದ ರಾಜ್ಯಮಟ್ಟದ ಪರಿಶೀಲನಾ ಮತ್ತು ನಿರ್ವಹಣಾ ಸಮಿತಿಯ ಸಭೆಯನ್ನು ಜನವರಿ 28 ರಂದು ನಡೆಸಿ ಪಹಣಿಗಳಿಗೆ ಆಧಾರ್ ಜೋಡಣೆ ಅಡಿಯಲ್ಲಿ ಕಾರ್ಯನಿರ್ವಹಿಸಿದ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರಿಗೆ ಪ್ರತಿಯೊಂದು ಆಧಾರ್ ಜೋಡಣೆಗೆ ತಲಾ ಒಂದು ರೂಪಾಯಿಯಂತೆ ಸಂಭಾವನೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.
ಈಗಾಗಲೇ ಪಿಎಫ್ಎಂಎಸ್ ಮೂಲಕ ಬಿಡುಗಡೆಗೊಳಿಸಲಾದ ಅನುದಾನದಲ್ಲಿ ಜಿಲ್ಲಾಧಿಕಾರಿಗಳ ಖಾತೆಯಿಂದ 4,45,67,634 ರೂಪಾಯಿಗಳನ್ನು ಆಧಾರ್ ಜೋಡಣೆಯಲ್ಲಿ ಮಹತ್ವದ ಪಾತ್ರ ವಹಿಸಿದ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಸಹಾಯಕರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.