ಬೆಂಗಳೂರು: ವೇತನ ಮತ್ತು ಭತ್ಯೆ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿಸೆಂಬರ್ 31 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಷ್ಕರದ ನೋಟಿಸ್ ಅನ್ನು ಸಲ್ಲಿಸಲಾಗಿದೆ. ನೌಕರರ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಅನೇಕ ಪ್ರತಿಭಟನೆ, ಸಮಾವೇಶ, ಮನವಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಈ ಬಗ್ಗೆ ಚರ್ಚಿಸಲು ನಡೆದ ಸಭೆಯಲ್ಲಿ ಟಿಕೆಟ್ ದರ ಪರಿಷ್ಕರಣೆ ಆಗದ ಹೊರತು ವೇತನ ಪರಿಷ್ಕರಣೆ ಕಷ್ಟಸಾಧ್ಯ ಎಂದು ಆಡಳಿತ ವರ್ಗ ಹೇಳಿದೆ.
ಈ ವಿಳಂಬ ಧೋರಣೆಯಿಂದ ಬೇಸರಗೊಂಡು ಅನಿವಾರ್ಯವಾಗಿ ಶಾಂತಿಯುತ ಮುಷ್ಕರದ ನಿರ್ಧಾರ ಕೈಗೊಂಡಿದ್ದಾರೆ. ಡಿಸೆಂಬರ್ 31ರ ನಂತರ ಬೇಡಿಕೆ ಈಡೇರುವವರೆಗೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಹೇಳಲಾಗಿದೆ.
ಹಿಂದಿನ ವೇತನ ಹೆಚ್ಚಳದ 38 ತಿಂಗಳ ಬಾಕಿ ಬಿಡುಗಡೆ ಮಾಡಬೇಕು. ಮೂಲವೇತನಕ್ಕೆ ಶೇಕಡ 25 ರಷ್ಟು ವೇತನ ಹೆಚ್ಚಿಸಿ ಶೇಕಡ 31 ರಷ್ಟು ತುಟ್ಟಿ ಭತ್ಯೆ ವಿಲೀನಗೊಳಿಸಿ ವೇತನ ಶ್ರೇಣಿ ಸಿದ್ಧಪಡಿಸಬೇಕು. ನೌಕರರ ಭತ್ಯೆಗಳನ್ನು 5 ಪಟ್ಟು ಹೆಚ್ಚಳ ಮಾಡಬೇಕು. ಪ್ರತಿ ತಿಂಗಳು 2000 ರೂ. ವೈದ್ಯಕೀಯ ಚಿಕಿತ್ಸಾ ವೆಚ್ಚ ನೀಡಬೇಕು. ಬಸ್ ನಿಲ್ದಾಣ ಮತ್ತು ಬಸ್ ಘಟಕಗಳಲ್ಲಿ ಸೂಕ್ತ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಶಕ್ತಿ ಯೋಜನೆಯಿಂದ ಆಗುತ್ತಿರುವ ಶಿಕ್ಷೆ, ಕಿರುಕುಳ ಸಮಸ್ಯೆ ಪರಿಹರಿಸಬೇಕು. ನೌಕರರ ಮುಂಬಡ್ತಿಗೆ ಕ್ರಮ ಕೈಗೊಳ್ಳಬೇಕು. ಹೆಚ್ಚುವರಿ ಕೆಲಸದ ಅವಧಿಗೆ ಓಟಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗಿದೆ.