ಬೆಂಗಳೂರು: ರಾಜ್ಯದ 15 ಸರ್ಕಾರಿ ನೌಕರರು, ಅಧಿಕಾರಿಗಳಿಗೆ ಸೇರಿದ 68 ಸ್ಥಳಗಳಲ್ಲಿ 503 ಎಸಿಬಿ ಅಧಿಕಾರಿಗಳ 68 ತಂಡಗಳಿಂದ ದಾಳಿ ನಡೆಸಲಾಗಿದೆ.
ಕಲಬುರಗಿ ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್ ಎಸ್.ಎಂ. ಬಿರಾದರ್ ನಿವಾಸದಲ್ಲಿ 54 ಲಕ್ಷ, 50 ಸಾವಿರ ರೂಪಾಯಿ ಪತ್ತೆಯಾಗಿದೆ. 100 ಗ್ರಾಂ ಚಿನ್ನಾಭರಣ, 36 ಎಕರೆ ಕೃಷಿ ಜಮೀನು, 15 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಕಲಬುರ್ಗಿಯಲ್ಲಿ ಎರಡು ವಾಸದ ಮನೆ, ಬೆಂಗಳೂರಿನಲ್ಲಿ ಒಂದು ನಿವೇಶನ, ಮೂರು ವಿವಿಧ ಕಂಪನಿಯ ಕಾರು, 1 ದ್ವಿಚಕ್ರವಾಹನ, 1 ಶಾಲಾ ವಾಹನ, 2 ಟ್ರ್ಯಾಕ್ಟರ್ ಪತ್ತೆಯಾಗಿದೆ.
ಎಸಿಬಿ ದಾಳಿಯಲ್ಲಿ ಗದಗ ಕೃಷಿ ಇಲಾಖೆ ಅಧಿಕಾರಿ ಟಿ.ಎಸ್. ರುದ್ರೇಶಪ್ಪ ಅವರ ಬಳಿ ಬರೋಬ್ಬರಿ 9.43 ಕೆಜಿ ಚಿನ್ನದ ಬಿಸ್ಕೆಟ್, 3 ಕೆಜಿ ಬೆಳ್ಳಿ, 20 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು, ಶಿವಮೊಗ್ಗ ಸಿಟಿಯಲ್ಲಿ ಎರಡು ವಾಸಯೋಗ್ಯ ಮನೆಗಳು, ಎರಡು ದ್ವಿಚಕ್ರ ವಾಹನಗಳು, 8 ಎಕರೆ ಕೃಷಿ ಜಮೀನು 4 ನಿವೇಶನ ಪತ್ತೆಯಾಗಿವೆ.
ಬೆಂಗಳೂರು ಸಕಾಲ ಆಡಳಿತಾಧಿಕಾರಿ ಎಲ್.ಸಿ. ನಾಗರಾಜ್ ಅವರ ನಿವಾಸದಲ್ಲಿ 43 ಲಕ್ಷ ರೂಪಾಯಿ ಪತ್ತೆಯಾಗಿದೆ. 14 ಲಕ್ಷ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. 1.76 ಕೆಜಿ ಚಿನ್ನಾಭರಣ, ಬೆಂಗಳೂರು ನಗರದಲ್ಲಿ ವಾಸದ ಮನೆ, ನೆಲಮಂಗಲದಲ್ಲಿ ವಾಸದ ಮನೆ, ನೆಲಮಂಗಲ ತಾಲ್ಲೂಕಿನಲ್ಲಿ 11 ಎಕರೆ 26 ಗುಂಟೆ ಕೃಷಿಭೂಮಿ ಹಾಗೂ ಕೈಗಾರಿಕಾ ಉದ್ದೇಶದ ಒಂದು ಕಟ್ಟಡ ಪತ್ತೆಯಾಗಿದೆ. ಎಲ್.ಸಿ. ನಾಗರಾಜ್ ಅವರ ಬಳಿ ಮೂರು ಕಾರುಗಳು ಇವೆ.