ಬೆಂಗಳೂರು: ಜಾಲತಾಣಗಳಲ್ಲಿ ಎಲ್ಲೆ ಮೀರಿದ ಸರ್ಕಾರಿ ನೌಕರರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ.
ಸರ್ಕಾರಿ ನೌಕರರು ರಾಜಕೀಯವಾಗಿ ತಟಸ್ಥವಾಗಿರಬೇಕು. ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಿಯಮ ಮೀರಿ ವರ್ತಿಸಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಯಮಗಳ ಅನುಸಾರ ಸರ್ಕಾರಿ ನೌಕರರು ಸಂಪೂರ್ಣವಾಗಿ ನೀತಿ, ನಿಷ್ಠೆ ಹೊಂದಿರಬೇಕಿದೆ. ಅನುಚಿತವಾದ ಯಾವುದನ್ನು ಮಾಡಬಾರದು. ಆಕಾಶವಾಣಿ, ದೂರದರ್ಶನ ಪ್ರಸಾರ, ಚಲನಚಿತ್ರ, ಬರವಣಿಗೆ, ಸಂಪೂರ್ಣವಾಗಿ ಸಾಹಿತ್ಯಕ, ಕಲಾತ್ಮಕ, ವೈಜ್ಞಾನಿಕ ಸ್ವರೂಪದ್ದಾಗಿರುವುದನ್ನು ಪ್ರಾಧಿಕಾರದ ಪೂರ್ವಾನುಮತಿಯೊಂದಿಗೆ ಕೈಗೊಳ್ಳಬಹುದು. ಸರ್ಕಾರದ ಯಾವುದೇ ನೀತಿ ಅಥವಾ ಕ್ರಮದ ಬಗ್ಗೆ ಪ್ರತಿಕೂಲ ಟೀಕೆ ಮಾಡುವಂತಹ, ಅಂತಹ ಯಾವುದೇ ಸಂಗತಿಗಳ ಬಗ್ಗೆ ನಿರೂಪಣೆ ಅಥವಾ ಅಭಿಪ್ರಾಯವ್ಯಕ್ತಪಡಿಸಬಾರದು ಎಂದು ಹೇಳಲಾಗಿದೆ
ಕೆಲವರು ನಿಯಮ ಮೀರಿ ಸರ್ಕಾರ ಹಾಗೂ ಇತರೆ ನೌಕರರಿಗೆ ಮುಜುಗರ ತರುವಂತಹ ಅಭಿಪ್ರಾಯ ವ್ಯಕ್ತಪಡಿಸುವುದು, ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಲೇಖನ, ಅಭಿಪ್ರಾಯ, ವಿಡಿಯೋ ಹಂಚಿಕೊಳ್ಳುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಲಾಗಿದೆ. ಕಾನೂನಿಗೆ ವಿರುದ್ಧವಾಗಿರುವುದನ್ನು ಮಾಡುವ ನೌಕರರ ವಿರುದ್ಧ ಕ್ರಮಕೈಗೊಳ್ಳುವಂತೆ ಸಕ್ಷಮ ಪ್ರಾಧಿಕಾರಗಳಿಗೆ ತಿಳಿಸಲಾಗಿದೆ.