ಬೆಂಗಳೂರು: ಸರ್ಕಾರಿ ನೌಕರರು ಕಚೇರಿಗೆ ನಿಗದಿತ ಅವಧಿಗೆ ಹಾಜರಾಗಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಆದೇಶ ಹೊರಡಿಸಿದ್ದಾರೆ.
ಬೆಳಗ್ಗೆ 10 ಗಂಟೆಗೆ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕು. ಕಚೇರಿ ಅವಧಿ ಪೂರ್ಣವಾಗುವವರೆಗೆ ನಿಗದಿತ ಸ್ಥಾನದಲ್ಲಿರಬೇಕು. ಕಚೇರಿ ಅವಧಿಯಲ್ಲಿ ಅನ್ಯ ಕೆಲಸದ ಮೇಲೆ ತೆರಳಿದರೆ ಕಾರಣ ನಮೂದಿಸಿ ಅಧಿಕಾರಿಗಳ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ವಿಳಂಬ ಹಾಜರಾತಿ, ಕಚೇರಿ ಅವಧಿಯಲ್ಲಿ ಸ್ವಸ್ಥಾನದಲ್ಲಿ ಇಲ್ಲದಿದ್ದರೆ, ಮೇಲಧಿಕಾರಿಗಳ ಅನುಮತಿ ಪಡೆಯದಿದ್ದರೆ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನೌಕರರ ವಿರುದ್ಧ ಸಕ್ಷಮ ಪ್ರಾಧಿಕಾರದಿಂದ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಲಾಗಿದೆ.