ಬೆಂಗಳೂರು: ಈ ವರ್ಷ ಸಾರ್ವತ್ರಿಕ ವರ್ಗಾವಣೆ ನಿರೀಕ್ಷೆಯಲ್ಲಿದ್ದ ನೌಕರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಈ ವರ್ಷ ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾಡದಿರಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ವರ್ಗಾವಣೆಗೆ ಅವಕಾಶ ನೀಡಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ ಈ ವರ್ಷ ವರ್ಗಾವಣೆಗೆ ಅವಕಾಶ ನೀಡದಿರಲು ಸಿಎಂ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ವರ್ಗಾವಣೆಗೆ ಅವಕಾಶ ನೀಡುವಂತೆ ಸಚಿವರು, ಶಾಸಕರು, ನೌಕರರ ವಲಯದಿಂದ ಒತ್ತಡ ಹೆಚ್ಚಾಗಿದೆ. ಆದರೆ, ನೌಕರರ ವರ್ಗಾವಣೆ ಮಾಡಿದರೆ ಸ್ಥಳಾಂತರ ಭತ್ಯೆ ನೀಡಬೇಕಾಗುತ್ತದೆ. ಇದರಿಂದ ಆರ್ಥಿಕ ಹೊರೆಯಾಗುತ್ತದೆ. ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಇರುವುದರಿಂದ ವರ್ಗಾವಣೆ ಬೇಡವೆಂದು ಸಿಎಂ ಹೇಳಿದ್ದು, ಅನಿವಾರ್ಯ ಸಂದರ್ಭ ಹೊರತುಪಡಿಸಿ ಉಳಿದ ನೌಕರರ ಸಾರ್ವತ್ರಿಕ ವರ್ಗಾವಣೆ ಈ ವರ್ಷ ಇರುವುದಿಲ್ಲ ಎಂದು ಹೇಳಲಾಗಿದೆ.