ಸಾಮಾನ್ಯವಾಗಿ ತನ್ನ ಉದ್ಯೋಗಿಗಳಿಗೆ ರಜೆಗಳನ್ನು ಕೊಡುವ ವಿಚಾರದಲ್ಲಿ ಯಾವುದೇ ಕಂಪನಿ ಅಷ್ಟು ಧಾರಾಳಿಯಾಗಿರುವುದಿಲ್ಲ. ಆದರೆ ಚೀನಾದ ಈ ಉದ್ಯೊಗಿಯೊಬ್ಬರಿಗೆ ಭರ್ಜರಿ ರಜೆಯ ಜಾಕ್‌ಪಾಟ್ ಒಲಿದಿದೆ.
ಶೆಂಜ಼ೆನ್ ಪ್ರಾಂತ್ಯದ ಗುವಾಂಗ್‌ಡೊಂಗ್‌ನ ಕಂಪನಿಯೊಂದು ಏಪ್ರಿಲ್ 9ರಂದು ಆಯೋಜಿಸಿದ್ದ ವಾರ್ಷಿಕ ಡಿನ್ನರ್ ಕಾರ್ಯಕ್ರಮದಲ್ಲಿ ರಜೆಯ ಲಾಟರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸ್ಫರ್ಧೆಯಲ್ಲಿ ಬಂಪರ್ ಬಹುಮಾನ ಗೆದ್ದ ಉದ್ಯೋಗಿಯೊಬ್ಬರಿಗೆ ಒಂದು ವರ್ಷದ ಮಟ್ಟಿಗೆ ವೇತನ ಸಹಿತ ರಜೆಯ ಭಾರೀ ಬಹುಮಾನ ಒಲಿದಿದೆ!
ಈ ಲಕ್ಕಿ ಡ್ರಾನಲ್ಲಿ ಬಹುಮಾನ ಹಾಗೂ ದಂಡಗಳ ಸಾಧ್ಯತೆಗಳೂ ಸೇರಿದ್ದವು. ದಂಡದ ರೂಪದಲ್ಲಿ ಮನೆಯಲ್ಲಿ ಮಾಡಿದ ಪೇಯದ ಸೇವನೆ ಅಥವಾ ವೇಟರ್ ಆಗಿ ಕೆಲಸ ಮಾಡುವಂಥ ಟಾಸ್ಕ್‌ಗಳಿದ್ದರೆ, ಬಹುಮಾನವಾಗಿ ಹೆಚ್ಚುವರಿಯಾಗಿ ವೇತನ ಸಹಿತ ರಜೆಗಳಿದ್ದವು.
ಕೋವಿಡ್-19 ಸೋಂಕಿನ ಅವಾಂತರದ ಹಿನ್ನೆಲೆಯಲ್ಲಿ ಮೂರು ವರ್ಷಗಳ ಬಳಿಕ ಇಂಥದ್ದೊಂದು ಲಕ್ಕಿ ಡ್ರಾ ಇರುವ ವಾರ್ಷಿಕ ಡಿನ್ನರ್ ಆಯೋಜಿಸಲಾಗಿತ್ತು. 365 ದಿನಗಳ ಕಾಲ ವೇತನ ಸಹಿತ ರಜೆಯ ಸಾಧ್ಯತೆಯು ಈ ಲಕ್ಕಿ ಡ್ರಾನಲ್ಲಿ ಭಾರೀ ಕಡಿಮೆ ಎಂದು ಹೇಳಲಾಗುತ್ತದೆ.
ಅಂದ ಹಾಗೆ, ಈ ಬಂಪರ್ ಜಯಿಸಿದ ಉದ್ಯೋಗಿಯ ಹೆಸರೇನೆಂದು ತಿಳಿದು ಬಂದಿಲ್ಲ.