
ವಿದ್ಯಾರ್ಥಿಯಾಗಿದ್ದ ಅವಧಿಯಲ್ಲಿ ಒಬ್ಬ ಬೆಸ್ಟ್ ಟೀಚರ್ ಇದ್ದೇ ಇರುತ್ತಾರೆ, ಅವರು ನಮ್ಮ ವೃತ್ತಿಜೀವನದ ಜೊತೆಗೆ ವ್ಯಕ್ತಿತ್ವವನ್ನು ರೂಪಿಸಲು ಸಹಾಯ ಮಾಡಿರುತ್ತಾರೆ. ಅಂದಹಾಗೆ ಅಂತಹ ಶಿಕ್ಷಕರನ್ನು ಸುದೀರ್ಘ ಸಮಯದ ನಂತರ ಭೇಟಿಯಾಗುವುದು ಭಾವನಾತ್ಮಕವಾಗಿರುತ್ತದೆ.
ಅಂತಹದ್ದೇ ಒಂದು ಪ್ರಸಂಗ ಫ್ಲೈಟ್ ಅಟೆಂಡೆಂಟ್ ಅವರಿಗಾಗಿದೆ. ಲೋರಿ ಎಂಬ ಫ್ಲೈಟ್ ಅಟೆಂಡೆಂಟ್ 30 ವರ್ಷಗಳ ನಂತರ ವಿಮಾನದಲ್ಲಿ ತನ್ನ ಮೆಚ್ಚಿನ ಶಿಕ್ಷಕರನ್ನು ಭೇಟಿಯಾಗಿದ್ದು, ಆ ಘಳಿಗೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಲೋರಿ ತನ್ನ ಶಿಕ್ಷಕಿಯನ್ನು ವಿಮಾನದಲ್ಲಿ ನೋಡಿದ ದಿನವು ಅಂತರರಾಷ್ಟ್ರೀಯ ಶಿಕ್ಷಕರ ದಿನವಾಗಿತ್ತು ಎಂಬುದು ವಿಶೇಷ. ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಬಳಕೆದಾರರಾದ ಕಿಯೋನಾ ಥ್ರಾಶರ್ ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಆಕೆ ತನ್ನ ಶಿಕ್ಷಕಿಯಾದ ಓ’ಕಾನ್ನೆಲ್ ತನ್ನ ಭವಿಷ್ಯವನ್ನು ರೂಪಿಸಲು ಹೇಗೆ ಸಹಾಯ ಮಾಡಿದರು ಎಂಬುದನ್ನು ಹಂಚಿಕೊಂಡು ವಿಮಾನದೊಳಗೆ ಓಡಿ ಶಿಕ್ಷಕಿಯನ್ನು ತಬ್ಬಿಕೊಂಡಿದ್ದು ಕಾಣಬಹುದು. ಆ ಶಿಕ್ಷಕಿ ಕೂಡ ಮೈದಡವಿ ಖುಷಿಪಡುವುದನ್ನು ನೋಡಬಹುದು. ಇದನ್ನು ಕಂಡ ನೆಟ್ಟಿಗರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.