ವಾಷಿಂಗ್ಟನ್: 1970ರ ಚಿಪ್ಕೋ ಆಂದೋಲನದಲ್ಲಿ ಅಹಿಂಸಾತ್ಮಕ ಸಾಮಾಜಿಕ ಮತ್ತು ಪರಿಸರ ಆಂದೋಲನದ ಮೂಲಕ ಕಾಡುಗಳನ್ನು ಸಂರಕ್ಷಿಸಿದ ಭಾರತೀಯ ಗ್ರಾಮೀಣ ಮಹಿಳೆಯರನ್ನು ಹಾಲಿವುಡ್ ನಟಿ ಎಮ್ಮಾ ವ್ಯಾಟ್ಸನ್ ಶ್ಲಾಘಿಸಿದ್ದಾರೆ.
ತನ್ನ ಇನ್‌ಸ್ಟಾಗ್ರಾಮ್ ನಲ್ಲಿ 1970 ರ ಭಾರತೀಯ ಗ್ರಾಮೀಣ ಹಳ್ಳಿಗರ ನೇತೃತ್ವದ ಪ್ರಸಿದ್ಧ ಪರಿಸರ ಸಂರಕ್ಷಣಾ ಆಂದೋಲನದ (ಚಿಪ್ಕೋ ಚಳುವಳಿ) ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.
ಕಾಡುಗಳು ಮತ್ತು ಮರಗಳನ್ನು ರಕ್ಷಿಸಿದ್ದಕ್ಕಾಗಿ ಧನ್ಯವಾದಗಳು ! ಈ ಚಿತ್ರದಲ್ಲಿರುವ ಮಹಿಳೆಯರು ಚಿಪ್ಕೋ ಚಳುವಳಿಯ ಭಾಗವಾಗಿದ್ದರು. 1970 ರ ದಶಕದಲ್ಲಿ ಭಾರತದ ಗ್ರಾಮೀಣ ಹಳ್ಳಿಗರು, ವಿಶೇಷವಾಗಿ ಮಹಿಳೆಯರು, ಅಹಿಂಸಾತ್ಮಕ ಸಾಮಾಜಿಕ ಮತ್ತು ಪರಿಸರಕ್ಕಾಗಿ ಹೋರಾಡಿದ್ದಾರೆ. ಇಲ್ಲಿ ಅವರು ಮರಗಳನ್ನು ಕಡಿಯದಂತೆ ಮರವನ್ನು ತಬ್ಬಿಕೊಂಡು ರಕ್ಷಿಸುತ್ತಿದ್ದಾರೆ. ಚಿಪ್ಕೋ ಎಂಬ ಹಿಂದಿ ಪದದ ಅರ್ಥ ತಬ್ಬಿಕೊಳ್ಳುವುದು ಅಥವಾ ಅಂಟಿಕೊಳ್ಳುವುದು ಎಂಬುದು ಆಗಿದೆ ಎಂದು ವಿವರಗಳೊಂದಿಗೆ ನಟಿ ಪೋಸ್ಟ್ ಮಾಡಿದ್ದಾರೆ.
ಭಾರತದ ಚಿಪ್ಕೋ ಚಳುವಳಿಯನ್ನು ಶ್ಲಾಘಿಸಿದ್ದಕ್ಕೆ ಇನ್ಸ್ಟಾಗ್ರಾಂನ ಹಲವಾರು ಭಾರತೀಯ ಬಳಕೆದಾರರು ನಟಿ ವ್ಯಾಟ್ಸನ್ ಗೆ ಧನ್ಯವಾದ ತಿಳಿಸಿದ್ದಾರೆ. ನಟಿ ಎಮ್ಮಾ ವ್ಯಾಟ್ಸನ್ ಅನೇಕ ವರ್ಷಗಳಿಂದ ಪರಿಸರ ಸಂರಕ್ಷಣೆಯ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ.