ಇತ್ತೀಚಿನ ದಿನಗಳಲ್ಲಿ ಬಹುತೇಕರು ಯಾವುದೇ ವಸ್ತುಗಳನ್ನು ಖರೀದಿಸಬೇಕೆಂದರೂ ಇಎಂಐ ಮೊರೆ ಹೋಗುತ್ತಿರುವುದು ಸಾಮಾನ್ಯ. ಒಮ್ಮೆಲೆ ಹಣ ಕೊಟ್ಟು ಕೊಳ್ಳಲು ಸಾಧ್ಯವಾಗಿಲ್ಲದಿರುವುದರಿಂದ ಬಹುತೇಕರು ಸಾಲದ ರೀತಿ, ತಿಂಗಳಿಗೆ ಇಷ್ಟು ರೂ. ಗಳೆಂಬಂತೆ ಇಎಂಐ ಕಟ್ಟುತ್ತಾರೆ. ಹೆಚ್ಚಾಗಿ ಎಲೆಕ್ಟ್ರಾನಿಕ್ ವಸ್ತುಗಳು, ಮನೆ, ಕಾರು ಇತ್ಯಾದಿಗಳಿಗೆ ಇಎಂಐ ಕಟ್ಟುವುದು ನೋಡಿರಬಹುದು, ಆದರೆ, ಇಲ್ಲೊಂದೆಡೆ ಮಾವಿನ ಹಣ್ಣಿನ ಮೇಲೂ ಇಎಂಐ ಕಟ್ಟಬಹುದು ಎಂಬುದು ನಿಮಗೆ ಗೊತ್ತಿದೆಯಾ?
ಹೌದು, ಅಲ್ಫೊನ್ಸೋ ಮಾವಿನ ಹಣ್ಣಿನ ಬೆಲೆಗಳು ಕಣ್ಣಲ್ಲಿ ನೀರು ತರಿಸುವಷ್ಟು ಹೆಚ್ಚಾಗಿರುವ ಕಾರಣ, ಮಹಾರಾಷ್ಟ್ರದ ಪುಣೆಯ ವ್ಯಾಪಾರಿಯೊಬ್ಬರು ಇಎಂಐನಲ್ಲಿ ಮಾವುಗಳನ್ನು ಮಾರಾಟ ಮಾಡುತ್ತಿದ್ದಾರೆ. ರೆಫ್ರಿಜರೇಟರ್‌ಗಳು, ಹವಾ ನಿಯಂತ್ರಣಗಳನ್ನು ಕಂತುಗಳಲ್ಲಿ ಖರೀದಿಸಬಹುದಾದರೆ, ಮಾವಿನಹಣ್ಣನ್ನು ಏಕೆ ಖರೀದಿಸಬಾರದು ಎಂಬುದು ಈ ವ್ಯಾಪಾರಿಯ ಪ್ರಶ್ನೆಯಾಗಿದೆ. ಹೀಗಾಗಿ ಈ ವ್ಯಾಪಾರಿ ಮಾವಿನ ಹಣ್ಣುಗಳನ್ನು ಖರೀದಿಸಲು ಇಚ್ಛಿಸುವವರು ಸಹ ಇಎಂಐ ಮುಖಾಂತರ ಪಾವತಿ ಮಾಡುವಂತಹ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ಕೊಂಕಣ ಪ್ರದೇಶದ ದೇವಗಡ ಮತ್ತು ರತ್ನಗಿರಿಯ ಅಲ್ಫೊನ್ಸೊ ಅಥವಾ ‘ಹಾಪಸ್’ ಮಾವಿನ ಹಣ್ಣುಗಳು ಅತ್ಯುತ್ತಮವೆಂದು ಪರಿಗಣಿಸಲಾಗಿದ್ದು, ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಡಜನ್‌ಗೆ 800 ರಿಂದ 1300 ರೂ.ಗೆ ಮಾರಾಟವಾಗುತ್ತಿದೆ. ಇದುವರೆಗೆ ನಾಲ್ಕು ಗ್ರಾಹಕರು ಇಎಂಐ ಮುಖಾಂತರ ಮಾವಿನ ಹಣ್ಣನ್ನು ಖರೀದಿಸಿದ್ದಾರಂತೆ.