ನೋಯ್ಡಾ ರೇವ್ ಪಾರ್ಟಿ ಮೇಲೆ ಉತ್ತರ ಪ್ರದೇಶದ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿಯ ಮಾಡಿದ ವೇಳೆ ರಕ್ಷಿಸಲ್ಪಟ್ಟ ಐದು ನಾಗರಹಾವು ಸೇರಿದಂತೆ ಒಂಬತ್ತು ಹಾವುಗಳನ್ನು ಕಾಡಿಗೆ ಬಿಡುಗಡೆ ಮಾಡಿದ್ದಾರೆ.
ನವೆಂಬರ್ 3 ರಂದು ಸೆಕ್ಟರ್ 51 ರ ಬ್ಯಾಂಕ್ವೆಟ್ ಹಾಲ್‌ನಿಂದ ಐದು ಜನರನ್ನು ಪೊಲೀಸರು ಬಂಧಿಸಿದರು. 20 ಮಿಲಿ ಶಂಕಿತ ಹಾವಿನ ವಿಷವನ್ನು ವಶಪಡಿಸಿಕೊಂಡರು.
ರಕ್ಷಿಸಲ್ಪಟ್ಟ ಎಲ್ಲಾ ಹಾವುಗಳ ವಿಷ ಗ್ರಂಥಿಗಳು ಮತ್ತು ಹಲ್ಲುಗಳು ಕಾಣೆಯಾಗಿವೆ. ಅಲ್ಲದೆ, ರಕ್ಷಿಸಲಾದ ಒಂಬತ್ತು ಹಾವುಗಳ ಪೈಕಿ ಎಂಟು ಹಾವುಗಳಲ್ಲಿ ಹಲ್ಲುಗಳು ಕಾಣೆಯಾಗಿವೆ. ಅರಣ್ಯ ಇಲಾಖೆಯಿಂದ ವಿಚಾರಣೆ ನಡೆಸುವಂತೆ ತಿಳಿಸಲಾಗಿದೆ. ಮುಂದಿನ ಕ್ರಮಕ್ಕಾಗಿ ನಾವು ನಮ್ಮ ವರದಿಯನ್ನು ಅದಕ್ಕೆ ಸಲ್ಲಿಸಿದ್ದೇವೆ ಎಂದು ತನಿಖಾ ಸಮಿತಿಯ ನೇತೃತ್ವ ವಹಿಸಿರುವ ಡಾ ನಿಖಿಲ್ ವರ್ಷ್ನಿ ಹೇಳಿದ್ದಾರೆ.
ನೋಯ್ಡಾದಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಹಾವುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿಗೆ ಬಿಟ್ಟಿದ್ದಾರೆ.
ವಿಭಾಗೀಯ ಅರಣ್ಯಾಧಿಕಾರಿ ಪ್ರಮೋದ್ ಕುಮಾರ್ ಶ್ರೀವಾಸ್ತವ ಅವರ ಪ್ರಕಾರ, ಅವರ ಇಲಾಖೆಯು ಪಶುವೈದ್ಯಕೀಯ ಇಲಾಖೆಯ ವರದಿಯನ್ನು ಸ್ವೀಕರಿಸಿದೆ; ಮತ್ತು ಅದನ್ನು ಈಗ ಮುಂದಿನ ಕಾನೂನು ಪ್ರಕ್ರಿಯೆಗಳಿಗಾಗಿ ನ್ಯಾಯಾಲಯದಲ್ಲಿ ಸಲ್ಲಿಸಲಾಗುವುದು.
ಒಂಬತ್ತು ಹಾವುಗಳು ನಮ್ಮ ವಶದಲ್ಲಿದ್ದವು ಮತ್ತು ಇಂದು ನಾವು ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ಸೂರಜ್‌ಪುರ ವೆಟ್‌ಲ್ಯಾಂಡ್ಸ್‌ಗೆ ಬಿಡುಗಡೆ ಮಾಡಿದ್ದೇವೆ ಎಂದು ಶ್ರೀವಾಸ್ತವ ತಿಳಿಸಿದರು.
ವಿಚಾರಣೆಯ ನಂತರ ಎಲ್ವಿಶ್ ಯಾದವ್ ಗೆ ಅನಾರೋಗ್ಯ
ರೇವ್ ಪಾರ್ಟಿಯಲ್ಲಿ ಹಾವಿನ ವಿಷದ ಬಳಕೆಯಲ್ಲಿ ಬಿಗ್ ಬಾಸ್ OTT 2 ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ ಅವರ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಮಂಗಳವಾರ ತಡರಾತ್ರಿ(ನವೆಂಬರ್ 7) ನೋಯ್ಡಾ ಪೊಲೀಸರ ಮುಂದೆ ಹಾಜರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ, ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಬಹಿರಂಗಪಡಿಸಿದರು.
ಈ ಪ್ರಕರಣದಲ್ಲಿ ಇತರ ಐವರ ಜೊತೆಗೆ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಹೆಸರಿಸಲ್ಪಟ್ಟ ನಂತರ ಎಲ್ವಿಶ್‌ನನ್ನು ಪ್ರಶ್ನಿಸಲಾಯಿತು. ನೋಯ್ಡಾದಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಹಾವಿನ ವಿಷವನ್ನು ಪೂರೈಸಿದ ಆರೋಪದಲ್ಲಿ ಎಲ್ವಿಶ್ ಯಾದವ್ ಸೇರಿದಂತೆ ಆರು ಜನರ ವಿರುದ್ಧ ನೋಯ್ಡಾ ಸೆಕ್ಟರ್ 49 ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.