ಸಂಬಂಧಗಳು ಮುರಿದರೆ ಯಾರಿಗೆ ನೋವಾಗೊಲ್ಲ ಹೇಳಿ. ಜೊತೆಗೆ ಕಳೆದ ಸಮಯ, ಮಾತು, ಜಗಳ ಎಲ್ಲವೂ ನೆನಪಾಗಿ ಮನಸ್ಸು ಕೊರಗುತ್ತಲೇ ಇರುತ್ತೆ. ಕೆಲವರು ಈ ನೋವಿನಿಂದ ಬೇಗನೆ ಹೊರಗೆ ಬಂದು ಬಿಟ್ಟರೆ ಇನ್ನೂ ಕೆಲವರು ಆ ನೋವನ್ನ ಮನಸ್ಸಿನೊಳಗೆ ಸಮಾಧಿ ಮಾಡಲು ವರ್ಷಾನುಗಟ್ಟಲೆ ಕಳೆದು ಬಿಡುತ್ತಾರೆ.
ಆದರೆ ಎಲೋನ್ ಮಸ್ಕ್ ಮಾಜಿ ಗೆಳತಿ ಕೊಂಚ ಭಿನ್ನ. ಆಕೆ ಎಲೋನ್ ಮಸ್ಕ್ ಮತ್ತು ತನ್ನ ಸಂಬಂಧ ಮುರಿದು ಬಿದ್ದರೂ ಅದರಿಂದಾನೆ ಆಕೆ ಕೋಟಿ-ಕೋಟಿ ರೂಪಾಯಿ ಲಾಭವನ್ನ ಗಳಿಸಿದ್ದಾಳೆ. ಆಕೆ ಮಾಡಿದ್ದು ಇಷ್ಟೆ. ಎಲೋನ್ ಮಸ್ಕ್ ಮತ್ತು ತಾನು ರಿಲೆಶನ್ಶಿಪ್ ಇದ್ದಾಗಿನ ಫೋಟೋವನ್ನ ಹರಾಜಿಗೆ ಇಟ್ಟಿದ್ದಳು.
ಎಲೋನ್ ಮಸ್ಕ್ ಅವರ ಕಾಲೇಜಿನ ಗೆಳತಿ ಜೆನ್ನಿಫರ್ ಗ್ವಿನ್ನೆ ಅವರು, 1990 ರ ದಶಕದಲ್ಲಿ ಮಸ್ಕ್ ಜೊತೆ ಡೇಟಿಂಗ್ ಮಾಡುವಾಗ ತಮ್ಮಿಬ್ಬರ ಖಾಸಗಿ ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದಾರೆ. ಆದರೀಗ ಮದುವೆಯಾಗಿ ಸಂತೋಷವಾಗಿರುವ ಮಹಿಳೆ, ತನ್ನ ಮಲಮಗನ ಕಾಲೇಜು ಶಿಕ್ಷಣಕ್ಕೆ ಹಣ ಹೊಂದಿಸಲು ಫೋಟೋಗಳನ್ನು ಹರಾಜು ಹಾಕಿರುವುದಾಗಿ ಹೇಳಿದ್ದಾರೆ.
ಎಲೋನ್ ಮಸ್ಕ್ ಮತ್ತು ಗೆಳತಿ 1994 ಮತ್ತು 1995 ರ ನಡುವೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಇನ್ನು ಮಸ್ಕ್ ತನಗೆ ಉಡುಗೊರೆಯಾಗಿ ನೀಡಿದ್ದ ಚಿನ್ನದ ಸರವನ್ನೂ 40 ಲಕ್ಷ ರೂ.ಗೆ ಅವರು ಮಾರಾಟ ಮಾಡಿದ್ದಾರೆ.
ಈಗಾಗಲೇ ಮಸ್ಕ್ ನೀಡಿದ ಹುಟ್ಟುಹಬ್ಬದ ಕಾರ್ಡ್ 13 ಲಕ್ಷಕ್ಕೆ ಹರಾಜಾಗಿದೆ. ಇನ್ನು ಮಸ್ಕ್ ಗೆಳತಿ ಒಟ್ಟು 18 ಫೋಟೋಗಳನ್ನು ಹರಾಜು ಹಾಕಿದ್ದಾರೆನ್ನಲಾಗಿದೆ.
ಸದ್ಯ ಮಸ್ಕ್ ಹಾಗೂ ಅವರ ಈ ಮಾಜಿ ಗೆಳತಿ ಜೆನ್ನಿಫರ್ ಗ್ವಿನ್ನೆ ಸಂಪರ್ಕದಲ್ಲಿಲ್ಲ ಎನ್ನಲಾಗಿದ್ದು, ತಮ್ಮಿಬ್ಬರ ಖಾಸಗಿ ಫೋಟೋಗಳ ಹರಾಜಿನಿಂದ ಆಕೆ ಬರೋಬ್ಬರಿ 1.3 ಕೋಟಿ ರೂಪಾಯಿ ಗಳಿಸಿದ್ದಾರೆ.