ಸಾಮಾಜಿಕ ಜಾಲತಾಣ ‘ಟ್ವಿಟರ್’ ಕೊನೆಗೂ ವಿಶ್ವದ ಅತಿ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಪಾಲಾಗಿದೆ. ಟ್ವಿಟರ್ ಖರೀದಿಸಲು ಕಳೆದ ಕೆಲವು ದಿನಗಳಿಂದ ನಿರಂತರ ಪ್ರಯತ್ನ ನಡೆಸುತ್ತಿದ್ದ ಎಲಾನ್ ಮಸ್ಕ್, ಬರೋಬ್ಬರಿ 3.48 ಲಕ್ಷ ಕೋಟಿ ರೂಪಾಯಿಗಳಿಗೆ ಟ್ವಿಟ್ಟರ್ ಖರೀದಿಸುತ್ತಿದ್ದು, ಇದಕ್ಕೆ ಕಂಪನಿಯ ಆಡಳಿತ ಮಂಡಳಿ ಸಮ್ಮತಿ ನೀಡಿದೆ ಎನ್ನಲಾಗಿದೆ.
ಎಲಾನ್ ಮಸ್ಕ್ ಅವರಿಗೆ ಟ್ವಿಟರ್ ಮಾರಾಟ ಮಾಡಲು ಈ ಹಿಂದೆ ಆಡಳಿತ ಮಂಡಳಿ ಒಲವು ತೋರಿರಲಿಲ್ಲ. ಹೀಗಾಗಿ ಮಸ್ಕ್ ಅವರ ಕಂಪನಿ ಟೆಸ್ಲಾ ಟ್ವಿಟರ್ ಖರೀದಿಗೆ ತಮ್ಮ ಬಳಿ ಪ್ಲಾನ್-ಬಿ ಸಹ ಇರುವುದಾಗಿ ಹೇಳಿಕೊಂಡಿದ್ದರು. ವೈಯಕ್ತಿಕ ಷೇರುದಾರರಿಂದ ಷೇರುಗಳನ್ನು ಖರೀದಿಸಿ ಎಲಾನ್ ಮಸ್ಕ್ ಹಿಡಿತ ಸಾಧಿಸಬಹುದೆಂಬ ಕಾರಣಕ್ಕೆ ಟ್ವಿಟರ್ ಆಡಳಿತ ಮಂಡಳಿ ತನ್ನ ನಿಯಮಗಳಲ್ಲಿ ಬದಲಾವಣೆಯನ್ನೂ ಮಾಡಿತ್ತು. ಆದರೆ ಅಂತಿಮವಾಗಿ 3.48 ಲಕ್ಷ ಕೋಟಿ ರೂಪಾಯಿಗಳಿಗೆ ಡೀಲ್ ಕುದುರಿದೆ ಎಂದು ಹೇಳಲಾಗಿದೆ.
ಟ್ವಿಟರ್ ಖರೀದಿ ಡೀಲ್ ಕುರಿತು ಈಗಾಗಲೇ ಅಂತಿಮ ಮಾತುಕತೆಗಳು ನಡೆದಿದ್ದು, ಒಪ್ಪಂದದ ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ. ಟ್ವಿಟರ್, ಎಲಾನ್ ಮಸ್ಕ್ ಹಿಡಿತಕ್ಕೆ ಬಂದನಂತರ ಅದರ ನೀತಿಯಲ್ಲಿ ಕೆಲವೊಂದು ಅಮೂಲಾಗ್ರ ಬದಲಾವಣೆಗಳು ಆಗಬಹುದು ಎಂಬ ಮಾತುಗಳು ಉದ್ಯಮ ವಲಯದಲ್ಲಿ ಕೇಳಿಬರುತ್ತಿದೆ.